ಶಿಕಾರಿಪುರದಲ್ಲಿ ವಿಜಯೇಂದ್ರ ಪರ ಕಿಚ್ಚ ಸುದೀಪ್ ರೋಡ್ ಶೋ- ವಿಡಿಯೋ
ಶಿವಮೊಗ್ಗ: ಶಿಕಾರಿಪುರ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಬಿ. ವೈ. ವಿಜಯೇಂದ್ರ ಪರ ನಟ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ ನಡೆಸಿ ಮತಯಾಚಿಸಿದರು. ಪಟ್ಟಣದ ಅಕ್ಕಮಹಾದೇವಿ ವೃತ್ತದಿಂದ ಪ್ರಾರಂಭವಾದ ರೋಡ್ ಶೋ ಪ್ರಮುಖ ವೃತ್ತಗಳಲ್ಲಿ ಸಾಗಿ ಖಾಸಗಿ ಬಸ್ ನಿಲ್ದಾಣದ ಬಳಿ ಮುಕ್ತಾಯವಾಯಿತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ರೋಡ್ ಶೋ ನಲ್ಲಿ ನೆರೆದಿದ್ದರು.
ನಟ ಕಿಚ್ಚ ಸುದೀಪ್ ಮಾತನಾಡಿ, ನನಗೆ ಶಿಕಾರಿಪುರಕ್ಕೆ ಬರಲು ಆಗಿರಲಿಲ್ಲ, ವಿಜಯೇಂದ್ರ ಕೃಪೆಯಿಂದ ಬರಲು ಸಾಧ್ಯವಾಯಿತು. ಶಿಕಾರಿಪುರದ ನನ್ನ ಸ್ನೇಹಿತರನ್ನು ಭೇಟಿ ಆಗುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ಥ್ಯಾಂಕ್ಸ್ ಎಂದು ವಿಜಯೇಂದ್ರಗೆ ತಿಳಿಸಿದರು. ವಿಜಯೇಂದ್ರ ಅವರು ಸುಮಾರು ವರ್ಷದಿಂದ ಚುನಾವಣೆಯಲ್ಲಿ ಓಡಾಡಿದ್ದಾರೆ. ಹಲವರನ್ನು ಗೆಲ್ಲಿಸಿದ್ದಾರೆ. ವಿಜಯೇಂದ್ರ ಅವರು ಮೊದಲ ಬಾರಿಗೆ ಚುನಾವಣೆಗೆ ನಿಂತಿದ್ದಾರೆ. ಯಡಿಯೂರಪ್ಪ ಅವರು ತಮ್ಮ ಸ್ಥಾನ ಬಿಟ್ಟು ಕೊಟ್ಟಿಲ್ಲ, ಜವಾಬ್ದಾರಿಯನ್ನು ಬಿಟ್ಟು ಕೊಟ್ಟಿದ್ದಾರೆ ಎಂದರು.
ಆ ಜವಾಬ್ದಾರಿ ಬಹಳ ಸರಳವಾಗಿ ತೆಗೆದುಕೊಂಡು ಹೋಗುವ ಯೋಗ್ಯತೆ, ಅರ್ಹತೆ ವಿಜಯೇಂದ್ರ ಅವರಿಗಿದೆ. ನಾನು ಶಿಕಾರಿಪುರಕ್ಕೆ ಮತ ಕೇಳಲು ಬರಬೇಕಿರಲಿಲ್ಲ. ನಾನು ಅವರಿಗೆ ಹೇಳಿದೆ ಇಲ್ಲಿನ ಜನನೇ 50 ಸಾವಿರ ವೋಟ್ನಿಂದ ಗೆಲ್ಲಿಸುತ್ತಾರೆ. ನಾನು ಏಕೆ ಬರಲಿ ಎಂದು ಕೇಳಿದೆ. ನೀವು ಬನ್ನಿ ನಮ್ಮವರ ಮುಂದೆ ಗೆಲ್ಲಲು ನನಗೆ ಖುಷಿ ಎಂದರು. ಕ್ರಿಕೆಟ್ನಲ್ಲಿ ಒಂದು ರನ್ ನಲ್ಲಿ ಗೆದ್ದರು ಗೆದ್ದಾಗೆ. 50 ರನ್ ನಲ್ಲಿ ಗೆದ್ದರು ಗೆದ್ದಾಗೆ. ಗೆಲ್ಲೋದಕ್ಕೂ ಗತ್ತಿನಲ್ಲಿ ಗೆಲ್ಲೋದಕ್ಕು ಬಹಳ ವ್ಯತ್ಯಾಸ ಇದೆ ಎಂದು ಕಿಚ್ಚ ಹೇಳಿದ್ರು.
ಅವರು ಒಂದು ವೋಟಿನಲ್ಲಿ ಗೆದ್ದರೂ ಶಾಸಕರಾಗುತ್ತಾರೆ. ಆದರೆ ನಿಮ್ಮ ಪ್ರೀತಿಯನ್ನು ಅವರಿಗೆ ತೋರಿಸಬೇಕು ಎಂದರೆ ಒಂದು ಗತ್ತಿನಿಂದ ಗೆಲ್ಲಿಸಿ, ಆಗ ಅಭಿವೃದ್ಧಿ ಮಾಡಿದ್ದು, ಕೆಲಸ ಮಾಡಿಕೊಟ್ಟಿರೋದಕ್ಕೆ ಅರ್ಥ ಬರುತ್ತದೆ. ಈ ಜನ ನೋಡಿದ್ರೆ ನಿಮ್ಮನ್ನು ಸೋಲಲು ಬಿಡುವುದಿಲ್ಲ, ಯಡಿಯೂರಪ್ಪ ಅವರ ಪುತ್ರ ನಿಮ್ಮ ಆಸ್ತಿ, ಅವರಿಗೆ ಹಾರೈಸಿ ಎಂದು ಸುದೀಪ್ ಮನವಿ ಮಾಡಿದರು.
ಇನ್ನು ಭಾಷಣದ ಮಧ್ಯೆ ಅಭಿಮಾನಿಗಳು ಡೈಲಾಗ್ ಹೇಳುವಂತೆ ಸುದೀಪ್ರನ್ನು ಒತ್ತಾಯಿಸಿದಾಗ. ನಾವು ಇಲ್ಲಿ ಇವತ್ತು ಸೇರಿರೋದು ಏಕೆ ಅದನ್ನು ಮಾತ್ರ ಮಾಡಬೇಕು ಎಂದು ಗರಂ ಆದರು. ವೋಟ್ ಹಾಕದೇ ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಇವರ ಬಗ್ಗೆ ಬರೆಯಬಾರದು. ಎಲ್ಲಾರು ತಪ್ಪದೇ ವೋಟ್ ಹಾಕಬೇಕು ಎಂದು ಮತದಾನದ ಜಾಗೃತಿಯನ್ನು ಸಹ ಮೂಡಿಸಿದರು.
ಇದಕ್ಕೂ ಮೊದಲು ನಟ ಕಿಚ್ಚ ಸುದೀಪ್ ಶಿಕಾರಿಪುರದ ಕುಮದ್ವತಿ ಶಾಲಾ ಮೈದಾನಕ್ಕೆ ಹೆಲಿಕಾಪ್ಟರ್ನಲ್ಲಿ ಬಂದಿಳಿದರು. ಅವರನ್ನು ಸಂಸದ ಬಿ.ವೈ. ರಾಘವೇಂದ್ರ ಸ್ವಾಗತಿಸಿದರು. ಇನ್ನು ಈ ವೇಳೆ ಕೆಲ ಅಭಿಮಾನಿಗಳು ನಟ ಸುದೀಪ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ಇದನ್ನೂ ಓದಿ:ಸುಡಾನ್ನಿಂದ ವಾಪಸಾದ ಹಕ್ಕಿಪಿಕ್ಕಿ ಜನರೊಂದಿಗೆ ಮೋದಿ ಮಾತುಕತೆ-ವಿಡಿಯೋ