ಹ್ಯಾಪಿ ಬರ್ತ್‌ಡೇ ಶಾರುಖ್ ಖಾನ್! ಮಧ್ಯರಾತ್ರಿ ಮನೆ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳಿಗೆ ದರ್ಶನ-ವಿಡಿಯೋ - ಕಿಂಗ್ ಖಾನ್‌ಗೆ 58ನೇ ಹುಟ್ಟುಹಬ್ಬದ ಸಂಭ್ರಮ
Published : Nov 2, 2023, 8:23 AM IST
ಮುಂಬೈ:ಬಾಲಿವುಡ್ ಬಾದ್ ಶಾ, ಕಿಂಗ್ ಖಾನ್ ಎಂಬೆಲ್ಲ ಹೆಸರುಗಳಿಂದ ಕರೆಯಲಾಗುವ ನಟ ಶಾರುಖ್ ಖಾನ್ ಅವರಿಗೆ ಇಂದು 58ನೇ ಹುಟ್ಟುಹಬ್ಬದ ಸಂಭ್ರಮ. ತಮ್ಮ ಅದ್ಭುತ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಶಾರುಖ್ ಖಾನ್‌ಗೆ ಜಗತ್ತಿನ ವಿವಿಧೆಡೆಯಿಂದ ಹುಟ್ಟುಹಬ್ಬದ ಶುಭಾಶಯಗಳ ಸುರಿಮಳೆಯಾಗುತ್ತಿದೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಖಾನ್‌ಗೆ ಶುಭ ಕೋರಲು ಪ್ರತಿ ವರ್ಷ ಅವರ ಮನೆ ಬಳಿ ಸಾವಿರಾರು ಅಭಿಮಾನಿಗಳು ಆಗಮಿಸುತ್ತಾರೆ. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಾರೆ. ನೆರೆದಿರುವ ಅಭಿಮಾನಿಗಳನ್ನು ನಟ ನಿರಾಶೆಗೊಳಿಸುವುದಿಲ್ಲ. ಮನೆ ಬಾಲ್ಕನಿಯ ಮೇಲೆ ಬಂದು ಕೈಬೀಸಿ ಧನ್ಯವಾದ ಅರ್ಪಿಸುತ್ತಾರೆ.
ಈ ಬಾರಿಯೂ ಮುಂಬೈನ ಪಶ್ಚಿಮ ಬಾಂದ್ರಾದಲ್ಲಿರುವ ನಿವಾಸ 'ಮನ್ನತ್' ಬಳಿ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಮಧ್ಯರಾತ್ರಿ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ತಡರಾತ್ರಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಶಾರುಖ್ ಖಾನ್ ತಮ್ಮ ಮನೆಯ ಬಾಲ್ಕನಿ ಮೇಲೆ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಕೈ ಬೀಸಿ ಧನ್ಯವಾದ ಅರ್ಪಿಸಿದರು. ನೆಚ್ಚಿನ ನಟನನ್ನು ಕಂಡ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು.
ಕಳೆದ ಮೂರು ದಶಕಗಳ ಸಿನಿಮಾ ಜರ್ನಿಯಲ್ಲಿ ಶಾರುಖ್ ಖಾನ್ ಹಲವು ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ರೊಮ್ಯಾನ್ಸ್ ಪಾತ್ರಗಳನ್ನು ಸುಲಲಿತವಾಗಿ ಮಾಡುವ ಮೂಲಕ ಶಾರುಖ್ ಅವರನ್ನು 'ಕಿಂಗ್ ಆಫ್ ರೊಮ್ಯಾನ್ಸ್' ಎಂದೇ ಕರೆಯಲಾಗುತ್ತದೆ. ಆ್ಯಕ್ಷನ್ ಸಿನಿಮಾಗಳಲ್ಲೂ ಧೂಳೆಬ್ಬಿಸುವ ಶಾರುಖ್, ಬಾಕ್ಸ್ ಆಫೀಸ್ನಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ.
ಇದನ್ನೂ ಓದಿ:ಗರಡಿ ಸಿನಿಮಾ ನೋಡಿ ನಮ್ಮಂಥ ಕಲಾವಿದರಿಗೆ ಅನ್ನದಾತರಾಗಿ: ಅಭಿಮಾನಿಗಳಿಗೆ ದರ್ಶನ್ ಮನವಿ