ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ: ಹುತಾತ್ಮ ಪೊಲೀಸ್ ಅಧಿಕಾರಿಗಳು, ಯೋಧರಿಗೆ ಗೌರವ ನಮನ
Published : Nov 26, 2023, 11:42 AM IST
ಮುಂಬೈ: 2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಇಂದು 15 ವರ್ಷ. ಈ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಮತ್ತು ಯೋಧರಿಗೆ ಮುಂಬೈಯಲ್ಲಿ ಗಣ್ಯರು ಪುಷ್ಪನಮನ ಸಲ್ಲಿಸಿದರು.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗೌರವ ನಮನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯಪಾಲ ರಮೇಶ್ ಬೈಸ್, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವೀಸ್, ಮುಂಬೈನ ರಕ್ಷಕ ಸಚಿವ ದೀಪಕ್ ಕೇಸರ್ಕರ್, ಮುಂಬೈ ಉಪನಗರಗಳ ರಕ್ಷಕ ಸಚಿವ ಮಂಗಲ್ ಪ್ರಭಾತ್ ಲೋಧಾ, ಪೊಲೀಸ್ ಮಹಾನಿರ್ದೇಶಕ ಬ್ರಿಜೇಶ್ ಸಿಂಗ್, ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಪನ್ಹಾಲ್ಕರ್ ಸೇರಿದಂತೆ ಇತರರು ಇದ್ದರು.
2008ರ ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ 10 ಲಷ್ಕರ್-ಎ-ತೈಬಾ ಉಗ್ರರು ಮುಂಬೈ ಪ್ರವೇಶಿಸಿದ್ದರು. 60 ಗಂಟೆಗಳಿಗೂ ಹೆಚ್ಚು ಕಾಲ ನಗರಿಯನ್ನು ಮುತ್ತಿಗೆ ಹಾಕಿದ ಉಗ್ರರು, ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟ ನಡೆಸಿದ್ದರು. ಇದರ ಪರಿಣಾಮ 166 ಜನರು ಸಾವಿಗೀಡಾಗಿದ್ದರು. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಛತ್ರಪತಿ ಶಿವಾಜಿ ಟರ್ಮಿನಲ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ:ದೇಶ ವಿಭಜನೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ