ದೇವಾಲಯದ ಮುಂದೆ ಜನಜಾತ್ರೆ: ದೇವಿ ಪ್ರಸಾದದಿಂದ ಕೊರೊನಾ ದೂರವೆಂದು ಅಂತರ ಮರೆತ ಜನರು
ರಾಜ್ಗಢ (ಮಧ್ಯಪ್ರದೇಶ): ಇಲ್ಲಿನ ಖುಜ್ನೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರೊನಾ ಭೀತಿಯ ನಡುವೆ ದೇವಾಲಯದ ಮುಂದೆ ಅಂತರ ಮರೆತು ಜನಸಂದಣಿ ಸೇರಿದ್ದ ಘಟನೆ ಬೆಳಕಿಗೆ ಬಂದಿದೆ. ಕೊರೊನಾ ಹೋಗಲಾಡಿಸಲು ದೇವರ ಪ್ರಸಾದ ಎಂದು ನೀರನ್ನು ಎರಚಾಡಿ ಮೂಢನಂಬಿಕೆ ಹೆಸರಲ್ಲಿ ಜನ ಒಂದೆಡೆ ಸೇರಿರುವುದು ಕಂಡು ಬಂದಿದೆ. ನಿನ್ನೆಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಲಾಕ್ಡೌನ್ ನಿಯಮ ಸಡಿಲಿಸಿದ್ದು, ಇದೇ ನೆಪ ಇಟ್ಟುಕೊಂಡು ನೂರಾರು ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸಿದ್ದಾರೆ. ವಿಚಿತ್ರ ಎಂದರೆ ದೇವಿಗೆ ಅಭಿಷೇಕ ಮಾಡಿದ ನೀರನ್ನು ಸೇವಿಸುವುದರಿಂದ ಕೊರೊನಾ ಸೋಂಕು ತಗುಲುವುದಿಲ್ಲ ಎಂಬ ನಂಬಿಕೆಯಿಂದ ಜನ ಒಂದೆಡೆ ಸೇರಿದ್ದಾರೆ.