ಅಂತ್ಯಕ್ರಿಯೆಗೆ ಹಣಕೊಟ್ಟು ಆತ್ಮಹತ್ಯೆ... ದುರಂತ ಅಂತ್ಯ ಕಂಡ ಅನಾಥನ ಬದುಕು!
ಅನಾಥನಾಗಿ ಹುಟ್ಟಿ, ಪದವಿ ಮುಗಿಸಿ, ಸ್ವಂತ ಉದ್ಯೋಗ ಮಾಡುತ್ತಿದ್ದ ಯುವಕ ಕೊನೆಗೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇಲ್ಲಿನ ಫಿಲಂ ನಗರ್ ನಿವಾಸಿ ವಿಜಯ್ ಒಬ್ಬ ಅನಾಥ. ವಿಜಯ್ಗೆ ನನ್ನವರು ಎನ್ನುವವರು ಯಾರೂ ಇರಲಿಲ್ಲ. ಐದರ ಹರೆಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ವಿಜಯ್, ಕಷ್ಟಪಟ್ಟು ಡಿಗ್ರಿ ಮುಗಿಸಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ನಿನ್ನೆ ರೈಲಿನ ಕೆಳಗೆ ಬಿದ್ದು ಇಹಲೋಕದ ಪಯಣ ಮುಗಿಸಿದ್ದಾನೆ. ಆತ್ಮಹತ್ಯೆಗೂ ಮುನ್ನ ಕ್ಯಾಬ್ ಡ್ರೈವರ್ ಆಗಿ ಸಂಪಾದಿಸಿದ್ದ 6 ಸಾವಿರ ರೂಪಾಯಿ ಹಣವನ್ನು ಅಂತ್ಯಕ್ರಿಯೆ ಸಂಸ್ಥೆಗೆ ವಿಜಯ್ ನೀಡಿದ್ದಾರೆ. ಯಾವುದಾದ್ರೂ ಅನಾಥ ಶವ ಕಂಡಲ್ಲಿ ಅಂತ್ಯಕ್ರಿಯೆ ನಡೆಸಿ ಎಂದು ಹೇಳಿದ್ದಾನೆ. ಹಣ ಕೊಟ್ಟ ಮರುದಿನವೇ ಈತ ಚಲಿಸುತ್ತಿರುವ ರೈಲಿನಡಿ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಳಿಕ ಆತನ ಜೇಬಿನಿಂದ ದೊರೆತ ಪತ್ರದಲ್ಲಿ, ದಯವಿಟ್ಟು 'ಸರ್ವ್ ನೀಡಿ ಸ್ವಚ್ಚಂದ ಸೇವಾ ಸಂಸ್ಥೆ'ಗೆ ತನ್ನ ಸಾವಿನ ಸುದ್ದಿ ತಿಳಿಸಿ. ಅವರು ನನ್ನ ಅಂತ್ಯಕ್ರಿಯೆ ನಡೆಸುತ್ತಾರೆ ಎಂದು ಬರೆದಿತ್ತು. ಯುವಕನ ಇಚ್ಛೆಯಂತೆ ಹಣ ಪಡೆದುಕೊಂಡ ಸಂಸ್ಥೆ ಯುವಕನ ಅಂತ್ಯಕ್ರಿಯೆಯನ್ನು ವಿಧಿಬದ್ಧವಾಗಿ ನೆರವೇರಿಸಿದೆ. ಹೀಗೆ ಅನಾಥ ಯುವಕನ ಬದುಕು ದುರಂತ ಅಂತ್ಯಗೊಂಡಿದ್ದು ಮಾತ್ರ ವಿಧಿ ವಿಪರ್ಯಾಸ.