ಮಲಗುವಾಗ ಒಳ ಉಡುಪು ಧರಿಸದೇ ಮಲಗುವುದಕ್ಕೆ ಭಾಗಶಃ ಭಾರತೀಯರು ಒಪ್ಪುವುದಿಲ್ಲ. ಕಾರಣ, ಇದೊಂದು ಪಾಶ್ಚಿಮಾತ್ಯ ಶೈಲಿ ಎಂಬ ಭಾವನೆ. ಹೀಗಾಗಿ ಹೆಚ್ಚಿನ ಜನ ಒಳುಡುಪುಗಳನ್ನು ಧರಿಸಿಯೇ ನಿದ್ರಿಸುತ್ತಾರೆ. ಇದಕ್ಕೆ ಒಂದೆರಡು ಕಾರಣಗಳಲ್ಲ. ಕಾರಣ ಹಲವಿರಬಹುದು. ಆದ್ರೆ ಒಳ ಉಡುಪು ಧರಿಸದೇ ಆರಾಮವಾಗಿ ಮಲಗುವುದರಿಂದ ದೇಹಕ್ಕೆ ತುಂಬಾ ಅನುಕೂಲವಿದೆ ಎಂಬುದನ್ನು ಒಪ್ಪಲೇಬೇಕು.
ಸಾಮಾನ್ಯವಾಗಿ, ಒಳ ಉಡುಪು ಧರಿಸದೇ ಮಲಗುವುದು ಎಂಬ ಕಲ್ಪನೆಯನ್ನೇ ಒಪ್ಪಿಕೊಳ್ಳಲು ಹಲವು ಭಾರತೀಯರು ಸಿದ್ಧರಿಲ್ಲ. ಬೆತ್ತಲೆಯಾಗಿ ಮಲಗುವುದು ಸಂಪೂರ್ಣ ಖಾಸಗಿ ವಿಚಾರವೆಂದು ಪರಿಗಣಿಸುವ ನಾವು, ಬಟ್ಟೆ ಇಲ್ಲದೇ ಮಲಗುವ ಬಗ್ಗೆ ಯೋಚನೆ ಮಾಡುವುದೇ ಕಡಿಮೆ. ಎಲ್ಲಿಯವರೆಗೆ ಎಂದರೆ, ಒಬ್ಬರೇ ಇದ್ದರೂ ಕೂಡಾ ಒಳ ಉಡುಪು ಧರಿಸಿ ಮಲಗುವವರೇ ಹೆಚ್ಚು. ಇದಕ್ಕೆ ಕಾರಣ ನಾವು ಬೆಳೆದು ಬಂದ ರೀತಿ. ಸಾಮಾನ್ಯವಾಗಿ ದೊಡ್ಡ ದೊಡ್ಡ ಅವಿಭಕ್ತ ಕುಟುಂಬಗಳಲ್ಲಿ ಸಹೋದರರೊಂದಿಗೆ ಹುಟ್ಟಿ ಬೆಳೆದವರು ನಮ್ಮಲ್ಲಿ ಹೆಚ್ಚು. ಹೀಗಾಗಿ ಮುಜುಗರ ಅಥವಾ ಸಮಾಜಮುಖಿ ಯೋಚನೆಯಿಂದಾಗಿ, ಒಳ ಉಡುಪು ಧರಿಸದೇ ಮಲಗುವ ಬಗ್ಗೆ ಹಲವರು ಯೋಚನೆಯೇ ಮಾಡುವುದಿಲ್ಲ.
ಬಟ್ಟೆ ಹಾಕಿಕೊಂಡು ಮಲಗುವುದು ಅಥವಾ ಇಲ್ಲದೇ ಮಲಗುವುದನ್ನು ಆಯ್ಕೆ ಮಾಡಿಕೊಳ್ಳುವುದು ವೈಯಕ್ತಿಕ ವಿಚಾರ. ಆದರೂ ಬಟ್ಟೆ ಹಾಕಿಕೊಳ್ಳದೇ ಮಲಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂಬುದು ತಿಳಿದುಕೊಳ್ಳಬೇಕಾದ ಅಂಶ. ಬಟ್ಟೆ ಹಾಕದೇ ನಿದ್ರಿಸುವುದು ಉತ್ತಮ ಎಂದು ಹಲವು ತಜ್ಞರು ಪ್ರತಿಪಾದಿಸಿದ್ದು, ಈ ಬಗ್ಗೆ ತಜ್ಞರ ಅಭಿಪ್ರಾಯಗಳನ್ನಾಧರಿಸಿ ಕೆಲವೊಂದು ಆರೋಗ್ಯಕರ ಟಿಪ್ಸ್ ಇಲ್ಲಿದೆ ನೋಡಿ.
ಮಲಗುವ ಸಮಯದಲ್ಲಿ ನಿಮ್ಮ ಎಲ್ಲ ಬಟ್ಟೆಗಳು ತೆಗೆದು ನಿದ್ರಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಬಹು ಆಯಾಮದ ಪ್ರಯೋಜನಗಳಿವೆ. ಮಹಿಳೆಯರಿಗೆ ಯೋನಿ ಅಥವಾ ಜನನಾಂಗದ ಸಮಸ್ಯೆಗಳಿದ್ದರೆ ಒಳ ಉಡುಪು ಧರಿಸದೇ ಮಲಗುವುದು ಬಹಳ ಉತ್ತಮ.
ಗಾಳಿಯ ಮುಕ್ತ ಹರಿವಿಗೆ ಅವಕಾಶ...
ಒಳ ಉಡುಪು ಧರಿಸಿ ಮಲಗಿದಾಗ ಆ ಬಟ್ಟೆ ಜನನಾಂಗಗಳಿಗೆ ಒತ್ತಿದರೆ, ಅದು ತುಂಬಾ ಅಹಿತಕರವಾಗಿರುತ್ತದೆ. ಅಷ್ಟೇ ಅಲ್ಲ, ಒಳ ಉಡುಪು ಅಥವಾ ಪ್ಯಾಂಟಿಯ ಸಿಂಥೆಟಿಕ್ ಫ್ಯಾಬ್ರಿಕ್, ಯೋನಿಯ ಸರಾಗ ಉಸಿರಾಟಕ್ಕೆ ಅಡ್ಡಿಪಡಿಸುತ್ತದೆ. ಅಲ್ಲದೇ ಬಟ್ಟೆ ಇದ್ದರೆ, ಅದು ಯೋನಿಯ ತೇವಾಂಶವನ್ನು ಹೋಗಲಾಡಿಸಲು ಅವಕಾಶ ನೀಡುವುದಿಲ್ಲ. ಒಂದು ರೀತಿಯ ದ್ರವವನ್ನು ಸ್ರವಿಸುವ ಮೂಲಕ ಯೋನಿಯು ತನ್ನನ್ನು ತಾನೇ ಸ್ವಚ್ಛಗೊಳಿಸುತ್ತದೆ ಮತ್ತು ಅದು ಹಾಕಿರುವ ಒಳ ಉಡುಪುಗಳನ್ನು ಇಡೀ ದಿನ ಒದ್ದೆಯಾಗಿರುವಂತೆ ಮಾಡುತ್ತದೆ. ಹೀಗಾಗಿ ಸೋಂಕುಗಳಿಗೆ ಕಾರಣವಾಗುವ ತೇವಾಂಶವು ಆ ಭಾಗದಲ್ಲಿ ಇರದಂತೆ ಸ್ವಲ್ಪ ಉಸಿರಾಟದ ಸಮಯವನ್ನು ಅನುಮತಿಸುವುದು ಬಹಳ ಮುಖ್ಯ. ಹೀಗಾಗಿ ಒಳ ಉಡುಪು ಧರಿಸದೇ ಮಲಗುವ ಸಮಯದಲ್ಲಾದರೂ ಯೋನಿಯ ಉಸಿರಾಟಕ್ಕೆ ಅವಕಾಶ ಮಾಡಿಕೊಡುವುದು ಉತ್ತಮ ಎಂದು ನ್ಯೂಯಾರ್ಕ್ ಮೂಲದ OB/GYN ಎಂಡಿ ಆಗಿರುವ ಕಮೀಲಾ ಫಿಲಿಪ್ಸ್ ಹೇಳುತ್ತಾರೆ.