ಹಾಲಿನ ಪ್ಯಾಕೆಟ್ ಅನ್ನು ಫ್ರಿಡ್ಜ್ ನಲ್ಲಿ ಇಡುವ ಬದಲು ಕಬೋರ್ಡ್ನಲ್ಲಿ ಇಟ್ಟಿದ್ದೇವೆ. ಅಡುಗೆ ಮನೆಯಲ್ಲಿರಬೇಕಾದ ಬೇಳೆಕಾಳುಗಳನ್ನು ಫ್ರಿಡ್ಜ್ನಲ್ಲಿ ಇಟ್ಟಿದ್ದೇವೆ. ಮನೆಯ ಕೋಣೆಯೊಂದಕ್ಕೆ ಹೋಗಿ ನಂತರ ಇಲ್ಲಿಗೆ ಏಕೆ ಬಂದಿದ್ದೇವೆ? ಎಂದು ಯೋಚಿಸುತ್ತೇವೆ ಎಂದು ಕೆಲವರು ಆತಂಕ ವ್ಯಕ್ತಪಡಿಸುತ್ತಿರುತ್ತಾರೆ. ಈ ರೀತಿಯ ಅನುಭವ ನಿಮಗೂ ಆಗಿದ್ದರೆ ಆತಂಕಪಡುವ ಅಗತ್ಯವಿಲ್ಲ. ಈ ಎಲ್ಲ ರೋಗಲಕ್ಷಣಗಳು ಹೆರಿಗೆಯ ನಂತರ ಅನೇಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು"ಮಾಮ್ಸ್ ಬ್ರೈನ್" (mom's brain) ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ತಜ್ಞರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ.
ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದು: ಗರ್ಭಾವಸ್ಥೆಯಲ್ಲಿ ಮಾತ್ರವಲ್ಲದೆ ಹೆರಿಗೆಯ ನಂತರವೂ ಸಮತೋಲಿತ ಆಹಾರವನ್ನು ಕಡ್ಡಾಯವಾಗಿ ಸೇವಿಸಬೇಕು. ಅಪೌಷ್ಟಿಕತೆಯ ಹೊರತಾಗಿಯೂ ಹೆರಿಗೆಯ ನಂತರ ಈ ಸಮಸ್ಯೆ ಉಲ್ಬಣವಾಗುತ್ತದೆ. ವಿಶೇಷವಾಗಿ ಹಾಲುಣಿಸುವ ತಾಯಂದಿರಲ್ಲಿ ಮರೆಗುಳಿತನ ಕಾಣಿಸಿಕೊಳ್ಳುತ್ತದೆ. ಕೆಲವರು ಹೆರಿಗೆಯ ನಂತರ ಸಮತೋಲಿತ ಆಹಾರವನ್ನು ಸೇವಿಸುವುದಿಲ್ಲ. ಹಾಗೆ ಮಾಡುವುದು ತಪ್ಪು. ಹಸಿರು ತರಕಾರಿಗಳು, ಹಾಲು, ಹಣ್ಣುಗಳು ಮತ್ತು ಬೇಳೆಕಾಳುಗಳನ್ನು ಹೆರಿಗೆಯ ನಂತರ ಬಾಣಂತಿಯರು ಸೇವಿಸಬೇಕು.
ಒತ್ತಡ ಕಡಿಮೆ ಮಾಡಿಕೊಳ್ಳಿ: ಉದ್ಯೋಗಸ್ಥ ಮಹಿಳೆಯರು ಮಗುವಿನೊಂದಿಗೆ ತಮ್ಮ ಕೆಲಸ ಮತ್ತು ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಇವೆಲ್ಲವನ್ನೂ ನಿರ್ವಹಿಸಲು ಸಾಧ್ಯವಾಗದೇ ಅನೇಕ ಮಹಿಳೆಯರು ಆತಂಕ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ಇತಂಹ ಸಂದರ್ಭದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಲು ವಾಕಿಂಗ್, ಲಘು ವ್ಯಾಯಾಮ ಮತ್ತು ಪ್ರಾಣಾಯಾಮ ಮಾಡಬೇಕು. ಎಲ್ಲ ಕೆಲಸಗಳನ್ನು ಒಬ್ಬಳಿಗೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಕುಟುಂಬಸ್ಥರಿಗೆ ತಿಳಿಸಬೇಕು. ಇದರಿಂದ ನಿಮ್ಮ ಒಬ್ಬರ ಮೇಲೆಯೇ ಕೆಲಸದ ಒತ್ತಡ ಸಂಪೂರ್ಣವಾಗಿ ಬೀಳುವುದಿಲ್ಲ.