ನ್ಯೂಯಾರ್ಕ್: ಒಮಿಕ್ರಾನ್ ರೂಪಾಂತರದ ಕೋವಿಡ್ನಿಂದ ಸೋಂಕಿತರಾದ ಮಕ್ಕಳು ಪಾಸಿಟಿವ್ ವರದಿ ಬಂದ ಸರಾಸರಿ ಮೂರು ದಿನಗಳವರೆಗೆ ಸೋಂಕು ಹೊಂದಿರುತ್ತಾರೆ ಎಂದು ಭಾರತೀಯ ಮೂಲದ ವಿಜ್ಞಾನಿ ಕಂಡುಹಿಡಿದಿದ್ದಾರೆ. ಇಂಥ ಸಂದರ್ಭದಲ್ಲಿ ಸೋಂಕಿತ ಮಗು ಐದು ದಿನ ಶಾಲೆಗೆ ಹೋಗದಿದ್ದರೆ ಸಾಕು ಎಂದು ಅವರು ಹೇಳಿದ್ದಾರೆ.
"ಮಕ್ಕಳಿಗೆ ಒಮಿಕ್ರಾನ್ ಕೋವಿಡ್-19 ಸೋಂಕು ತಗುಲಿದಾಗ 5 ದಿನಗಳ ಪ್ರತ್ಯೇಕವಾಸ ಸಾಕು. ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ಶೈಕ್ಷಣಿಕ ಸಂಸ್ಥೆಗಳು 5 ದಿನಗಳಷ್ಟು ಕಡಿಮೆ ಅವಧಿಯ ಪ್ರತ್ಯೇಕವಾಸವನ್ನು ಅನುಸರಿಸಬಹುದು" ಎಂದು ಸಂಶೋಧನೆಯ ಸಹ-ಲೇಖಕ, ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಕೇಫರ್ ಕೇಂದ್ರದ ಹಿರಿಯ ವಿಜ್ಞಾನಿ ನೀರಜ್ ಸೂದ್ ಹೇಳಿದ್ದಾರೆ.
ಸೋಂಕಿನ ಸರಾಸರಿ ಸಮಯವು ಮೂರು ದಿನಗಳು ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಐದನೇ ದಿನದಂದು ಶೇಕಡಾ 18.4 ರಷ್ಟು ಮಕ್ಕಳು ಇನ್ನೂ ಸೋಂಕು ಹೊಂದಿರುತ್ತಾರೆ ಮತ್ತು ಶೇಕಡಾ 3.9 ರಷ್ಟು ಮಕ್ಕಳು 10 ನೇ ದಿನದಂದು ಕೂಡ ಸೋಂಕು ಹೊಂದಿರುತ್ತಾರೆ. ಲಸಿಕೆ ಪಡೆದಿರುವುದು ಮತ್ತು ಸೋಂಕು ಮುಂದುವರೆಯುವ ವಿಷಯದಲ್ಲಿ ಯಾವುದೇ ಸಂಬಂಧ ಕಂಡು ಬಂದಿಲ್ಲವಾದ್ದರಿಂದ, ಸೋಂಕಿತ ಮಕ್ಕಳು ಶಾಲೆಗೆ ಹಾಜರಾಗುವ ವಿಷಯದಲ್ಲಿ ಲಸಿಕೆಯ ವಿಚಾರವನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ಸಂಶೋಧನೆ ಹೇಳಿದೆ.