ನವದೆಹಲಿ: ಭಾರತದಲ್ಲಿ ಬ್ರೈನ್ ಟ್ಯೂಮರ್ ಪ್ರಕರಣಗಳು ನಿರಂತರವಾಗಿ ಹೆಚ್ಚಳವಾಗುತ್ತಿವೆ. ಆತಂಕಕಾರಿ ವಿಚಾರ ಎಂದರೆ, ಮಕ್ಕಳಲ್ಲಿ ಕೂಡ ಶೇ 20ರಷ್ಟು ಪ್ರಕರಣಗಳು ಏರಿಕೆ ಕಂಡಿವೆ. ಈ ವಿಚಾರವನ್ನು ವಿಶ್ವ ಬ್ರೈನ್ ಟ್ಯೂಮರ್ ದಿನದ ಅಂಗವಾಗಿ ತಜ್ಞ ವೈದ್ಯರು ತಿಳಿಸಿದ್ದಾರೆ. ಜೂನ್ 8ರಂದು ಜಗತ್ತಿನೆಲ್ಲೆಡೆ ವಿಶ್ವ ಬ್ರೈನ್ ಟ್ಯೂಮರ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಟ್ಯೂಮರ್ ಕುರಿತು ಸಾರ್ವಜನಿಕರಲ್ಲಿ ಅರಿವಿನ ಜೊತೆಗೆ ಶಿಕ್ಷಣ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುವುದು.
2020ರಲ್ಲಿ ಭಾರತೀಯರಲ್ಲಿ ಕಂಡು ಬರುತ್ತಿರುವ 10 ಸಾಮಾನ್ಯ ಟ್ಯೂಮರ್ನಲ್ಲಿ ಬ್ರೈನ್ ಟ್ಯೂಮರ್ ಒಂದು. ದಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಕ್ಯಾನ್ಸರ್ ರಿಜಿಸ್ಟ್ರಿಸ್ (ಐಎಆರ್ಸಿ) ವರದಿ ಅನುಸಾರ, ಪ್ರತಿ ವರ್ಷ ಭಾರತದಲ್ಲಿ 28 ಸಾವಿರ ಬ್ರೈನ್ ಟ್ಯೂಮರ್ ಪ್ರಕರಣಗಳು ವರದಿಯಾಗುತ್ತಿವೆ. ವಾರ್ಷಿಕವಾಗಿ 24 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ಹೇಳುತ್ತಿದೆ.
ದೇಶದಲ್ಲಿ ಬ್ರೈನ್ ಟ್ಯೂಮರ್ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ನಿರಂತವಾಗಿ ಎಲ್ಲ ವರ್ಗದ ಜನರಲ್ಲಿ ಏರುತ್ತಿದೆ. ಪ್ರತಿ ವರ್ಷ 40,000 ದಿಂದ 50,000 ಜನರಲ್ಲಿ ಪ್ರಕರಣ ಪತ್ತೆಯಾಗುತ್ತಿದೆ. ಇದರಲ್ಲಿ ಶೇ 20ರಷ್ಟು ಮಕ್ಕಳಲ್ಲಿ ಕಂಡು ಬರುತ್ತಿದೆ ಎಂದು ವೈದ್ಯ ಆದಿತ್ಯ ಗುಪ್ತಾ ತಿಳಿಸಿದ್ದಾರೆ.
ಭಾರತದಲ್ಲಿ ಕೇಂದ್ರ ನರ ವ್ಯವಸ್ಥೆಯ ಟ್ಯೂಮರ್ ಪ್ರಕರಣಗಳು ಹೆಚ್ಚುತ್ತಿದೆ. ಪ್ರತಿ ಲಕ್ಷ ಜನರಲ್ಲಿ 5 ರಿಂದ 10 ರಷ್ಟು ಮಂದಿಯಲ್ಲಿ ಇದು ಕಾಣಿಸಿಕೊಳ್ಳುತ್ತಿದೆ. ಕೆಲವೇ ಜನರು ಇದರ ಬಗ್ಗೆ ತಿಳಿದಿದ್ದು, ಕೇವಲ ಶೇ 2ರಷ್ಟು ಮಂದಿ ಈ ಟ್ಯೂಮರ್ಗಳು ಕ್ಯಾನ್ಸರ್ ಆಗುತ್ತದೆ ಎಂಬ ಬಗ್ಗೆ ಮಾಹಿತಿ ಹೊಂದಿದ್ದಾರೆ ಎಂದು ಡಾ. ರವೀಂದ್ರ ಶ್ರೀವಾತ್ಸವ ಮಾಹಿತಿ ನೀಡಿದರು.