ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿರುವ ಕಸ್ತೂರ ಬಾ ವಸತಿ ನಿಲಯದ ವಿದ್ಯಾರ್ಥಿನಿಯರು ಯಾದಗಿರಿ: ಕಲುಷಿತ ನೀರು ಸೇವಿಸಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಪ್ರಕರಣ ಶನಿವಾರ ಸುರಪುರ ತಾಲೂಕಿನ ಕೆಂಭಾವಿ ಹೋಬಳಿಯ ಯಕ್ತಾಪುರ ಗ್ರಾಮದ ಕಸ್ತೂರ ಬಾ ವಸತಿ ನಿಲಯದಲ್ಲಿ ನಡೆದಿದೆ. ಈ ಘಟನೆಯಿಂದ ಜನರು ಆತಂಕಗೊಂಡಿದ್ದಾರೆ.
ಶಿಕ್ಷಣ ಇಲಾಖೆಯ ಕಸ್ತೂರ ಬಾ ವಸತಿ ನಿಲಯದ 100 ವಿದ್ಯಾರ್ಥಿನಿಯರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಓದುತ್ತಿದ್ದು, ಬೆಳಗ್ಗೆ ನೀರು, ಬಿಸ್ಕಿಟ್ ಹಾಗೂ ಚಹಾ ಸೇವನೆ ಮಾಡಿ ಶಾಲೆಗೆ ಬಂದ ವಿದ್ಯಾರ್ಥಿನಿಯರ ಪೈಕಿ ಐದಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಲೆ ಸುತ್ತು ಬಂದು ಶಾಲೆಯಲ್ಲಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಶಾಲಾ ಮುಖ್ಯಶಿಕ್ಷಕ ಮತ್ತು ವಸತಿ ನಿಲಯದ ಮೇಲ್ವಿಚಾರಕರು ಯಕ್ತಾಪುರ ಪ್ರಾಥಮಿಕ ಮತ್ತು ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ವಿದ್ಯಾರ್ಥಿನಿಯರಿಗೆ ದಾಖಲು ಮಾಡಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಇದರಿಂದ ವಿದ್ಯಾರ್ಥಿನಿಯರು ಚೇತರಿಸಿಕೊಂಡು ವಸತಿ ನಿಲಯಕ್ಕೆ ತೆರಳಿದ್ದಾರೆ. ಇನ್ನು ಕೆಲ ವಿದ್ಯಾರ್ಥಿನಿಯರಿಗೆ ಎರಡು ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.
ಈ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಯಕ್ತಾಪುರ ಗ್ರಾಮದತ್ತ ಧಾವಿಸಿ ಬಂದ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಹಾಗೂ ಜಿಪಂ ಸಿಇಒ ಗರೀಮಾ ಪನ್ವಾರ ಅವರು ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರು ಹಾಗೂ ನಿಲಯ ಮೇಲ್ವಿಚಾರಕರಿಂದ ಮಾಹಿತಿ ಪಡೆದರು.
ವಸತಿ ನಿಲಯದ ಅಡುಗೆ ಕೊಠಡಿ, ನೀರು ಸಂಗ್ರಹ ಸ್ಥಳ, ಶೌಚಾಲಯ ಸೇರಿದಂತೆ ಹಲವು ಸ್ಥಳಗಳನ್ನು ಪರಿಶೀಲಿಸಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಸತಿ ನಿಲಯಕ್ಕೆ ನೀರು ಒದಗಿಸುವ ತೆರೆದ ಬಾವಿಯ ನೀರನ್ನು ಪರೀಕ್ಷೆಗೊಳಪಡಿಸುವಂತೆ ಪಿಡಿಒ ಅವರಿಗೆ ಆದೇಶ ಮಾಡಿದರು. ನಂತರ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾದ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಎಲ್ಲ ವಿದ್ಯಾರ್ಥಿನಿಯರ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಅಪಾಯ ಇಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ ಟೀ, ಬಿಸ್ಕಿಟ್, ನೀರು ಸೇವಿಸಿದ ಬಳಿಕ ಶಾಲಾ ವಿದ್ಯಾರ್ಥಿನಿಯರು ವಾಂತಿ ಮಾಡಿದ್ದು, ಇದು ಕಲುಷಿತ ನೀರು ಸೇವನೆಯಿಂದ ಆಗಿದೆ. ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಇದಕ್ಕೆ ಗ್ರಾಪಂ ಪಿಡಿಒ ಅಧಿಕಾರಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶರಣಗೌಡ ಆಗ್ರಹಿಸಿದ್ದಾರೆ.
ಯಕ್ತಾಪುರ ಗ್ರಾಮದಲ್ಲಿ ವಾಂತಿಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದು, ವಸತಿ ನಿಲಯದ ಅಡುಗೆ ಕೊಠಡಿ, ನೀರು ಸಂಗ್ರಹ ಸ್ಥಳ, ಶೌಚಾಲಯ ಸೇರಿದಂತೆ ಹಲವು ಸ್ಥಳಗಳನ್ನು ಪರಿಶೀಲಿಸಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಸುಶೀಲಾ ಬಿ ತಿಳಿಸಿದರು.
ಇದನ್ನೂಓದಿ:ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ: ತುಂಗಾ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರ ರಕ್ಷಣೆ