ಸುರಪುರ: ಕರ್ನಾಟಕ ಸರ್ಕಾರದ ಕಂದಾಯ ಸಚಿವ ಆರ್. ಅಶೋಕ್ ಸುರಪುರ ತಾಲೂಕಿಗೆ ಇಂದು ಭೇಟಿ ನೀಡಿದರು.
ತಾಲೂಕಿನ ದೇವಾಪುರ ಹಳ್ಳದ ಸೇತುವೆ ಮೇಲೆ ನಿಂತು ನೆರೆ ಪೀಡಿತ ಸ್ಥಳಗಳನ್ನು ವೀಕ್ಷಿಸಿದರು. ರಸ್ತೆಯಲ್ಲಿಯೇ ನಿಂತು ನೆರೆ ವೀಕ್ಷಣೆ ನಡೆಸಿದ್ದಕ್ಕೆ ರೈತರು ಬೇಸರ ವ್ಯಕ್ತಪಡಿಸಿ ಇದು ಕಾಟಾಚಾರದ ವೀಕ್ಷಣೆಯಾಗಿದೆ ಎಂದರು.
ಸುರಪುರಕ್ಕೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ನೆರೆ ಪೀಡಿತ ಸ್ಥಳ ವೀಕ್ಷಣೆ ಮಾಡಿದರು. ನಂತರ ಸಚಿವ ಆರ್. ಅಶೋಕ್ ಮಾತನಾಡಿ, ಈ ಬಾರಿ ನೆರೆಯಿಂದ ಬೆಳೆ ಹಾನಿಯಾಗಿದ್ದು, ಇದಕ್ಕೆ ಎನ್‌ಡಿಆರ್‌ಎಫ್ ನಿಯಮದಂತೆ ಪರಿಹಾರ ನೀಡಲಾಗುವುದು ಹಾಗೂ ಮನೆಗಳನ್ನು ಕಳೆದುಕೊಂಡವರಿಗೆ ಕಳೆದ ಬಾರಿಯಂತೆ ಪರಿಹಾರ ನೀಡಲಾಗುವುದು ಎಂದರು. ಕಳೆದ ಬಾರಿ ನೆರೆ ಪರಿಹಾರ ವಿತರಣೆಯಲ್ಲಾದ ದೋಷದ ಬಗ್ಗೆ ಕೇಳಲಾದ ಪ್ರಶ್ನೆಗೆ ವಿವರಣೆ ನೀಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ), ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸನಗೌಡ ಯಡಿಯಾಪುರ ಸೇರಿದಂತೆ ಅನೇಕ ಜನ ಮುಖಂಡರು ಹಾಗೂ ಅಧಿಕಾರಿಗಳಿದ್ದರು.