ಬೆಂಗಳೂರು: ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಸ್ಟೆನೋಗ್ರಾಫರ್, ಜವಾನ ಸೇರಿದಂತೆ ಒಟ್ಟು 30 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಯಾದಾಗಿರಿ ಜಿಲ್ಲಾ ನ್ಯಾಯಾಲಯದ 30 ಹುದ್ದೆಗಳ ಮಾಹಿತಿ ಹೀಗಿದೆ.
- ಜವಾನ 3
- ಜವಾನ (ಕಲ್ಯಾಣ ಕರ್ನಾಟಕ) 21
- ಟೈಪಿಸ್ಟ್ 2
- ಟೈಪಿಸ್ಟ್ (ಕಲ್ಯಾಣ ಕರ್ನಾಟಕ) 3
- ಸ್ಟೆನೋಗ್ರಾಫರ್ 1
ವಿದ್ಯಾರ್ಹತೆ: ಜವಾನ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಟೈಪಿಸ್ಟ್ ಮತ್ತು ಸ್ಟನೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿ ಪೂರ್ವ ಪರೀಕ್ಷಾ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ಮೂರು ವರ್ಷದ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಮತ್ತು ಶೀಘ್ರಲಿಪಿಯಲ್ಲಿ ಪ್ರೌಢ ದರ್ಜೆ ಉತ್ತೀರ್ಣತೆ ಹೊಂದಿರಬೇಕು.
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ಮತ್ತು ಗರಿಷ್ಠ 35 ವರ್ಷಗಳನ್ನು ಮೀರಿರಬಾರದು. ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.