ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಹೋತಪೇಟ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ವೃದ್ಧೆ ಮೃತಪಟ್ಟಿದ್ದಾರೆ. 40 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಕ್ಕೆ ಈ ದುಸ್ಥಿತಿ ಬಂದಿದೆ ಎಂದು ಆರೋಪಿಸಲಾಗಿದೆ.
ವಯೋವೃದ್ಧೆ ಈರಮ್ಮ ಹಿರೇಮಠ (80) ಮೃತಪಟ್ಟಿದ್ದಾರೆ. ಇತ್ತೀಚೆಗೆ ಬೇರೆ ಕಾಯಿಲೆಯಿಂದ ಹೊನ್ನಪ್ಪಗೌಡ ಮಲ್ಲಣ್ಣಗೌಡ (40) ಮೃತಪಟ್ಟಿದ್ದರು. ಹೀಗಾಗಿ ಗ್ರಾಮದಲ್ಲಿ ರೋಗದ ಭೀತಿ ಆವರಿಸಿದೆ.
ಕಲುಷಿತ ನೀರಿನ ಬಗ್ಗೆ ಗ್ರಾಮಸ್ಥರು ಮಾತನಾಡಿದರು. ಊರ ಹೊರಗಿನ ಬಾವಿಯಿಂದ ನೀರನ್ನು ಟ್ಯಾಂಕ್‌ನಲ್ಲಿ ಸಂಗ್ರಹಿಸಿದ ಬಳಿಕ ಮನೆಗಳಿಗೆ ನೀರು ಪೂರೈಸುವ ಪೈಪ್ ಲೈನ್ಗಳು ಅಲ್ಲಲ್ಲಿ ಒಡೆದು ಹೋಗಿದ್ದು ಇದೆ, ಪೈಪುಗಳ ಮೂಲಕ ಚರಂಡಿ ನೀರು ಸೇರಿ ಅದೇ ನೀರನ್ನು ಪೂರೈಸಲಾಗುತ್ತಿದೆ. ಅಲ್ಲದೆ ಬಾವಿಯ ಸುತ್ತ ಭತ್ತದ ಗದ್ದೆಗಳಿವೆ. ಗದ್ದೆಯ ಕ್ರಿಮಿನಾಶಕ ಔಷಧಿಯ ಅಂಶ ನೀರಿನಲ್ಲಿ ಸಂಗ್ರಹವಾಗಿರಬಹುದು. ಇದರಿಂದ ವಾಂತಿಭೇದಿ ಕಾಣಿಸಿಕೊಂಡಿದೆ ಎಂಬ ಶಂಕೆ ಸಹ ಮೂಡಿದೆ.
ಚಿಕಿತ್ಸೆ ನೀಡಲು ವ್ಯವಸ್ಥೆ:ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕಲುಷಿತ ನೀರು ಸೇವಿಸಿ ಜನ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಶುದ್ಧ ಕುಡಿಯುವ ನೀರು ಪೂರೈಸುವುದು ದೂರದ ಮಾತಾಗಿದೆ. ಕೊನೆ ಪಕ್ಷ ಇರೋ ತೆರೆದ ಬಾವಿಗೆ ಮೇಲೆ ಏನನ್ನು ಮುಚ್ಚಿಲ್ಲ. ಸದ್ಯ ಗ್ರಾಮದಲ್ಲಿ ವೃದ್ಧೆ ಕಲುಷಿತ ನೀರು ಕುಡಿದು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿ ಬೀಡುಬಿಟ್ಟಿದ್ದಾರೆ. ಸಕಲ ರೀತಿಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆಗಳನ್ನು ಮಾಡಿದ್ದಾರೆ.
'ವಾರ್ಡ್ ನಂ. 1ರಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, ಶುಕ್ರವಾರದಿಂದ ವಾಂತಿಭೇದಿಗೆ ಉಪ ಆರೋಗ್ಯ ಕೇಂದ್ರದಲ್ಲಿ ಸಕಲ ವ್ಯವಸ್ಥೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. 6 ಜನ ಸಮುದಾಯ ಆರೋಗ್ಯ ಅಧಿಕಾರಿಗಳನ್ನು, 4 ಜನ ಕಿವಿ ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು ಗ್ರಾಮಕ್ಕೆ ನಿಯೋಜಿಸಲಾಗಿದ್ದು, ಅವರೆಲ್ಲ ಗ್ರಾಮದಲ್ಲೇ ಠಿಕಾಣಿ ಹೂಡಿದ್ದು 108 ಆಂಬುಲೆನ್ಸ್ ಸಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜನರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದ ಸಕಲ ತಯಾರಿ ಮಾಡಿಕೊಳ್ಳಲಾಗಿದೆ' ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ರಮೇಶ್ ಗುತ್ತೆದಾರ ಅವರು ತಿಳಿಸಿದ್ದಾರೆ.
ಅನೇಕ ವರ್ಷಗಳಿಂದ ಹೋತಪೇಟ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಜನ ಅಸ್ವಸ್ಥಗೊಂಡು ಇದೀಗ ಅದೇ ಕಲುಷಿತ ನೀರು ಸಾವಿಗೆ ಎರವಾಗಿದೆ. ಇನ್ನಾದರೂ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹೋತಪೇಟ್ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಓದಿ:ಕಲುಷಿತ ನೀರು ಸೇವನೆ: ಬೆಳಗಾವಿಯಲ್ಲಿ ಐವತ್ತಕ್ಕೂ ಅಧಿಕ ಜನ ಅಸ್ವಸ್ಥ