ಯಾದಗಿರಿ: ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ನೀಡುತ್ತಿರುವ ಅಲ್ಪ ಪ್ರೋತ್ಸಾಹ ಧನದಿಂದ ಜೀವನ ನಡೆಸಲು ಕಷ್ಟಪಡುವಂತಾಗಿದ್ದು, ಇದೀಗ 12 ಸಾವಿರ ಸಂಬಳ, ಖಾಯಂ ಹುದ್ದೆ ನೀಡುವಂತೆ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಆಗಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಜನರ ಆರೋಗ್ಯದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದ್ರೆ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಪ್ರತಿ ತಿಂಗಳು ನೀಡುತ್ತಿರುವ 4 ಸಾವಿರ ಪ್ರೋತ್ಸಾಹ ಧನ ಸಾಕಾಗದೇ ಕುಟುಂಬ ನಿರ್ವಹಣೆಗೆ ಹೆಣಗಾಡುವಂತಾಗಿದೆ. ಕಷ್ಟ ಸುಖ ಎನ್ನದೇ ಸೇವಾ ಮನೋಭಾವದಿಂದ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು, ಇದೀಗ 12 ಸಾವಿರ ರೂ. ಸಂಬಳ, ಖಾಯಂ ಹುದ್ದೆ ನೀಡುವಂತೆ ಹೋರಾಡುತ್ತಿದ್ದಾರೆ.
ರಾಜ್ಯದಲ್ಲಿ ಸುಮಾರು 40 ಸಾವಿರ, ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಗರ್ಭಿಣಿಯರು, ಮಗು ಮತ್ತು ಬಾಣಂತಿಯರ ಆರೈಕೆಗಾಗಿ ಇವರನ್ನು ನೇಮಿಸಲಾಗಿದೆ. ಆದ್ರೆ ಇದರ ಹೊರತಾಗಿಯೂ ಆಶಾ ಕಾರ್ಯಕರ್ತೆಯರನ್ನ ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಸರ್ವೆ ಕಾರ್ಯಕ್ಕೂ ಬಳಸಿಕೊಳ್ಳಲಾಗುತ್ತಿದೆ. ಪ್ರೋತ್ಸಾಹದ ಹಣದಲ್ಲೇ ಸ್ವತಃ ಖರ್ಚು ಮಾಡಿಕೊಂಡು ಕೆಲಸ ಮಾಡಿದ್ದಾರೆ.