ಯಾದಗಿರಿ:ಹೋಟೆಲ್, ಅಂಗಡಿ ಮುಂಗಟ್ಟು, ಗ್ಯಾರೇಜ್ ಸೇರಿದಂತೆ ಹಲವೆಡೆ ದಾಳಿ ನಡೆಸಿದ ಅಧಿಕಾರಿಗಳು 16 ಜನ ಬಾಲ ಕಾರ್ಮಿಕರನ್ನ ರಕ್ಷಣೆ ಮಾಡಿದ್ದಾರೆ. ಸುಭಾಷ್ ವೃತ್ತ, ಹೊಸ ಬಸ್ ನಿಲ್ದಾಣ, ಯಾದಗಿರಿ - ಚಿತ್ತಾಪುರ ರಸ್ತೆಯ ಅಂಗಡಿ ಮುಂಗಟ್ಟುಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಾರ್ಮಿಕರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಘಟಕ, ಮಕ್ಕಳ ಸಹಾಯವಾಣಿ, ಪೊಲೀಸ್ ಸಿಬ್ಬಂದಿಯಿಂದ ದಾಳಿ ನಡೆಸಿ ಕೂಲಿ ಕೆಲಸ ಮಾಡುತ್ತಿದ್ದ 16 ಬಾಲಕರನ್ನ ರಕ್ಷಣೆ ಮಾಡಲಾಗಿದೆ.
ಕೊರೊನಾ ಹಿನ್ನೆಲೆ ಶಾಲೆಗಳು ಬಂದ್ ಆಗಿದ್ದರಿಂದ ಈ ಬಾಲಕರೆಲ್ಲ ಅಲ್ಲಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಮಾಹಿತಿ ತಿಳಿದು ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ನಡೆಸಿ ರಕ್ಷಣೆ ಮಾಡಿದ ಬಾಲ ಕಾರ್ಮಿಕರಲ್ಲಿ ಹೆಚ್ಚು ವಿದ್ಯಾರ್ಥಿಗಳೇ ಇದ್ದಾರೆ.
16 ಜನ ಬಾಲ ಕಾರ್ಮಿಕರ ರಕ್ಷಣೆ ಮಕ್ಕಳ ಪೋಷಕರಿಗೆ ತಿಳಿ ಹೇಳುವ ಮೂಲಕ ಅಧಿಕಾರಿಗಳು ಮುಚ್ಚಳಿಕೆ ಪತ್ರ ಬರೆಸಿಕೊಂಡು ಎಲ್ಲ ಬಾಲಕರನ್ನ ಬಿಟ್ಟಿದ್ದಾರೆ. 14 ವರ್ಷದೊಳಗಿನ ಬಾಲಕರನ್ನ ಕೂಲಿ ಕೆಲಸಕ್ಕೆ ಬಳಸಿಕೊಂಡ ಅಂಗಡಿ ಮಾಲೀಕರ ಪರವಾನಗಿ ಪತ್ರ ಪಡೆದು ಅಧಿಕಾರಿಗಳು ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.