ಮುದ್ದೇಬಿಹಾಳ(ವಿಜಯಪುರ):ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಬಿರುಸಿನ ಮತದಾನ ನಡೆದಿದ್ದು, ಮುದ್ದೇಬಿಹಾಳದಲ್ಲಿ ಮತದಾನ ಕೇಂದ್ರಕ್ಕೆ ವಿಕಲಚೇತನ ಮಹಿಳೆಯೊಬ್ಬರು ಕಟ್ಟಪಟ್ಟು ಬಂದು ಮತದಾನ (Voting by a disability woman)ಮಾಡಿದರು.
ತಾಲೂಕಿನ ನಾಲತವಾಡದ ವಿಕಲಚೇತನ ಮಹಿಳೆ ಅನ್ನಪೂರ್ಣ ಅವರನ್ನು ತಹಶೀಲ್ದಾರ್ ಕಚೇರಿಯ ಮೂರನೇ ಮಹಡಿಯಲ್ಲಿದ್ದ ಮತಕೇಂದ್ರಕ್ಕೆ ಕರೆದೊಯ್ಯುವುದು ಸವಾಲಿನ ಕೆಲಸವಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಶರಣು ಬೂದಿಹಾಳಮಠ ಫೌಂಡೇಶನ್ ಸಂಚಾಲಕ ಮಹಾಂತೇಶ ಬೂದಿಹಾಳಮಠ, ನಾಲತವಾಡದ ವೀರೇಶ ಹಿರೇಮಠ, ಶಿಕ್ಷಕ ಎಲ್.ಎಂ. ಜೋಗಿ ಸೇರಿದಂತೆ ಮೊದಲಾದವರು ಅನ್ನಪೂರ್ಣ ಅವರನ್ನು ಖುರ್ಚಿ ಮೇಲೆ ಕೂರಿಸಿಕೊಂಡು ಮತದಾನ ಕೇಂದ್ರಕ್ಕೆ ಕರೆತಂದರು.
ಮತ ಚಲಾಯಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅನ್ನಪೂರ್ಣ, ಇದೇ ಮೊದಲ ಬಾರಿಗೆ ನಾನು ಮತ ಚಲಾಯಿಸಿದ್ದೇನೆ. ತಾಲೂಕಾಡಳಿತ ಕನಿಷ್ಠ ವ್ಹೀಲ್ಚೇರ್ ವ್ಯವಸ್ಥೆಯನ್ನು ಮಾಡಬೇಕಿತ್ತು. ಮತಕೇಂದ್ರ ಮೂರನೇ ಮಹಡಿಯಲ್ಲಿ ಇದ್ದುದರಿಂದ ಕಷ್ಟಪಡಬೇಕಾಯಿತು ಎಂದರು.