ವಿಜಯಪುರ:ರಾಶಿ ಮಾಡಲು ಇಡಲಾಗಿದ್ದ ಕಡಲೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆದಿದೆ.
ರಾಶಿ ಮಾಡಲೆಂದು ಇಟ್ಟಿದ್ದ ಕಡಲೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು ಸುಮಾರು 30 ಕ್ವಿಂಟಾಲ್ ಕಡಲೆ ಸುಟ್ಟು ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದೆ. ರೈತ ಮಹಿಳೆ ಸಾಂಯವ್ವ ಈಶ್ವರಪ್ಪ ಹುನ್ನೂರ ಎಂಬುವರಿಗೆ ಸೇರಿದ ಜಾಮೀನಿನಲ್ಲಿ ಘಟನೆ ನಡೆದಿದೆ.
ರೈತ ಮಹಿಳೆ ಆರು ಎಕರೆಯಲ್ಲಿ ಕಡಲೆ ಬೆಳೆದಿದ್ದರು. ರಾಶಿ ಮಾಡಲು ಕಡಲೆ ಕಟಾವು ಮಾಡಿ ಜಾಮೀನಿನಲ್ಲಿ ಇಟ್ಟಿದ್ದರು. ತಡರಾತ್ರಿ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.
ಈ ಸಂಬಂಧ ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.