ಗಂಗಾವತಿ /ವಿಜಯಪುರ/ರಾಯಚೂರು:ಕ್ರೈಸ್ತ ಸಮುದಾಯದ ಆರಾಧ್ಯ ದೈವ, ಮೇರಿ ಮಾತೆಯ ಕಂದ ಏಸು ಭೂಮಿಗೆ ಬಂದ ದಿನವನ್ನು ಆಚರಿಸುವ ಕ್ರಿಸ್ಮಸ್ ಹಬ್ಬದ ಸಲುವಾಗಿ ಇಂದು ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು.
ಗಂಗಾವತಿಯ ರಾಯಚೂರು ರಸ್ತೆಯಲ್ಲಿರುವ ಇನ್ಫ್ಯಾಂಟ್ ಆಫ್ ಜೀಸಸ್ ಚರ್ಚ್ (ಬಾಲ ಏಸುವಿನ ಮಂದಿರ) ಹಾಗೂ ಶ್ರೀರಾಮ ಮಂದಿರ ಹತ್ತಿರ ಇರುವ ಇವ್ಯಾಂಜಿಕಲ್ ಚರ್ಚ್ ಆಫ್ ಇಂಡಿಯಾದಲ್ಲಿ ಕ್ರೈಸ್ತ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಬಾಲ ಏಸು ಮಂದಿರದಲ್ಲಿ ಏಸುವಿನ ಜನನ ಕಾಲಕ್ಕೆ ಇದ್ದ ಗುಡಿಸಲು, ಹಳ್ಳಿಗಾಡಿನ ಸುಂದರ ಪ್ರಕೃತಿಯನ್ನು ಹೋಲುವಂತೆ ಮಾದರಿ ರಚಿಸಲಾಗಿದ್ದು, ಸಾರ್ವಜನಿಕರ ಗಮನ ಸೆಳೆಯಿತು.
ಏಸು ಭೂಮಿಗೆ ಬಂದ ದಿನ: ಎಲ್ಲೆಡೆ ಕ್ರಿಸ್ಮಸ್ಮಸ್ ಸಂಭ್ರಮ ವಿಜಯಪುರದಲ್ಲಿ ಕ್ರಿಸ್ಮಸ್ ಹಬ್ಬ ನಿಮಿತ್ತವಾಗಿ ನಗರದ ಕಂದಗಲ್ ಹನುಮಂತರಾಯ್ ರಂಗಮಂದಿರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಟಿ ಚರ್ಚ್ ವಿಜಯಪುರ ಇವರ ಸಂಯೋಗದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಜಾನಪದ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದರು. ಏಸು ಕ್ರಿಸ್ತನ ಜೀವನ ಚರಿತ್ರೆ ಕುರಿತ ಹಾಡು, ನೃತ್ಯಕ್ಕೆ ನಗರದ ಜನತೆ ಚಪ್ಪಾಳೆ, ಸಿಳ್ಳೆಯಿಂದ ಪ್ರೋತ್ಸಾಹಿಸಿದರು.
ಇನ್ನು ಏಸು ಕ್ರಿಸ್ತನ ಹುಟ್ಟುಹಬ್ಬವನ್ನು ರಾಯಚೂರಿನಲ್ಲಿ ಕ್ರೈಸ್ತ ಬಾಂಧವರಿಂದ ಅದ್ಧೂರಿಯಾಗಿ ಆಚರಿಸಲಾಯಿತು. ನಗರದ ಮೆಥೋಡಿಸ್ಟ್ ಚರ್ಚ್, ಸೆಂಟ್ ಮೇರಿಸ್, ಅಗಾಫೆ ಚರ್ಚ್, ಸೆಂಟ್ ಥಾಮಸ್ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಹಬ್ಬದ ಪ್ರಯುಕ್ತ ಚರ್ಚ್ಗಳನ್ನು ವಿಶೇಷ ಅಲಂಕಾರ ಮಾಡಲಾಗಿದ್ದಲ್ಲದೆ, ರಾತ್ರಿಯಿಂದಲೇ ವಿಶೇಷ ಪ್ರಾರ್ಥನೆ ಮಾಡಿ ಭಕ್ತಗಣ ತಮ್ಮ ಭಕ್ತಿ ಸಮರ್ಪಿಸಿದರು.