ಮುದ್ದೇಬಿಹಾಳ (ವಿಜಯಪುರ): ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಲ್ಲಿರುವರಿಗೆ ಸಿದ್ಧಪಡಿಸಲಾಗುತ್ತಿರುವ ಆಹಾರ ತಯಾರಿಕೆ ಕೇಂದ್ರಕ್ಕೆ ತಹಶೀಲ್ದಾರ್ ಜಿ.ಎಸ್.ಮಳಗಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.ತಾಪಂ ಇಓ ಶಶಿಕಾಂತ ಶಿವಪೂರೆ,ಸಿಪಿಐ ಆನಂದ ವಾಘಮೋಡೆ, ಮುಖ್ಯಾಧಿಕಾರಿ ಗೋಪಾಲ ಕಾಸೆ ಇದ್ದರು.
ತಾಲೂಕಾಡಳಿತದಿಂದ ಪೂರೈಕೆಗೆ ಕ್ರಮ:
ಊರಿಗೆ ಮರಳುವ ಧಾವಂತದಲ್ಲಿದ್ದ ಅನ್ಯ ರಾಜ್ಯದ ವಲಸೆ ಕಾರ್ಮಿಕರ ಆರೋಗ್ಯದ ಕಾಳಜಿ ವಹಿಸಲು ಜಿಲ್ಲಾಡಳಿತ ಮುಂದಾಗಿದ್ದು, ಅವರನ್ನು ಸದ್ಯಕ್ಕೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿದೆ.
ಜಿಲ್ಲಾಧಿಕಾರಿಗಳ ನಿರ್ದೇಶನದ ಬೆನ್ನಲ್ಲಿಯೇ ತಾಲೂಕಾಡಳಿತ ಅವರಿಗೆ ಇದ್ದಲ್ಲಿಯೇ ಊಟ ಪೂರೈಕೆಗೆ ಕ್ರಮ ಕೈಗೊಂಡಿದೆ.
ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ವಸತಿ ನಿಲಯದಲ್ಲಿ ಆಹಾರ ತಯಾರಿಕೆ ಕೇಂದ್ರವನ್ನು ತೆರೆಯಲಾಗಿದ್ದು ಇದಕ್ಕಾಗಿಯೇ ಇಲ್ಲಿ 40 ಅಡುಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಆಹಾರ ತಯಾರಿಸುವ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ ಎಲ್ಲೆಲ್ಲಿ ಕ್ವಾರಂಟೈನ್ :
ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿರುವ ವಲಸಿಗರಿಗೆ 25 ಸ್ಥಳಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.ಢವಳಗಿ ಕಸ್ತೂರ ಬಾ ವಸತಿ ನಿಲಯ, ಜಮ್ಮಲದಿನ್ನಿ ಕಿತ್ತೂರ ಚೆನ್ನಮ್ಮ ವಸತಿ ಶಾಲೆ, ಬಂಗರಗುಂಡ, ಕಾರಕೂರ, ಬಲದಿನ್ನಿ, ಸರೂರ, ಕಾಳಗಿ ಎಲ್.ಟಿ., ಚಿರ್ಚನಕಲ್, ಮಸೂತಿ, ಮುದೂರ ,ಹಂಡರಗಲ್, ರೂಢಗಿ, ಕೊಪ್ಪ, ಮಡಿಕೇಶ್ವರ, ಗೆದ್ದಲಮರಿ, ಮುದ್ನಾಳ, ಮಡಿಕೇಶ್ವರ ತಾಂಡಾ, ಯಲಗೂರ, ಹುಲ್ಲೂರ ಎಲ್.ಟಿ, ನಾಗರಬೆಟ್ಟ, ಹಗರಗುಂಡ ಗ್ರಾಮಗಳ ಸರಕಾರಿ ಶಾಲೆಗಳಲ್ಲಿ, ನಾಲತವಾಡದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಚವನಬಾವಿಯ ರೇವಣಸಿದ್ದೇಶ್ವರ ವಿದ್ಯಾಪೀಠ, ಜಟ್ಟಗಿ ಕ್ರಾಸ್‌ನ ಸಮುದಾಯ ಭವನದಲ್ಲಿ ವಲಸಿಗರಿಗೆ ಕ್ವಾರಂಟೈನ್ ಮಾಡಲಾಗಿದೆ.
ಐವರು ಅಧಿಕಾರಿಗಳ ಉಸ್ತುವಾರಿ:
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾರ್ಗದರ್ಶನದಲ್ಲಿ ಅನ್ಯ ರಾಜ್ಯಗಳಿಂದ ಬಂದ ಕಾರ್ಮಿಕರನ್ನು ಮೊದಲು ಮುದ್ದೇಬಿಹಾಳ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಸಲಾಗುತ್ತದೆ.ಬಳಿಕ ಅಲ್ಲಿಂದ ಅವರನ್ನು ಆಯಾ ಊರಿನಲ್ಲಿರುವ ಶಾಲೆ ಅಥವಾ ಸರಕಾರಿ ಸಮುದಾಯ ಭವನದಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ.ತಹಶೀಲ್ದಾರ್ ಜಿ.ಎಸ್.ಮಳಗಿ ಮುಂದಾಳತ್ವದಲ್ಲಿ ಆರೋಗ್ಯ ಅಧಿಕಾರಿ ಡಾ.ಸತೀಶ ತಿವಾರಿ, ತಾಪಂ ಇಓ ಶಶಿಕಾಂತ ಶಿವಪೂರೆ, ಮುದ್ದೇಬಿಹಾಳ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಸಿಪಿಐ ಆನಂದ ವಾಘಮೋಡೆ ಮೊದಲಾದವರು ಕರೊನಾ ಬಾರದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಕಾರ್ಮಿಕರಿಗೆ ಇದ್ದಲ್ಲಿಯೇ ಊಟ ಸರಬರಾಜು:
ಐದು ಮಾರ್ಗದಲ್ಲಿ ಗ್ರಾಮ ಪಂಚಾಯಿತಿ ಪಿಡಿಓಗಳ ಸಹಕಾರ ಪಡೆದುಕೊಂಡಿರುವ ತಾಲೂಕಾಡಳಿತ ವಲಸೆ ಕಾರ್ಮಿಕರನ್ನು ಕ್ವಾರಂಟೈನ್‌ಗೆ ಎಲ್ಲಿ ಇರಿಸಲಾಗಿದೆಯೋ ಅಲ್ಲಿಯೇ ತೆರಳಿ ಆಹಾರದ ಪೊಟ್ಟಣ ವಿತರಿಸುವುದಕ್ಕೆ ಮುಂದಾಗಿದ್ದಾರೆ.ಅಡುಗೆ ತಯಾರಿಸುವವರು ಸಹ ಮಾಸ್ಕ, ಸ್ಯಾನಿಟೈಜರ್ ಬಳಕೆ ಮಾಡುತ್ತಿದ್ದಾರೆ.ಶುಚಿತ್ವವನ್ನೂ ಕಾಪಾಡುತ್ತಿದ್ದಾರೆ.ಇದರಿಂದ ಬಿಸಿ ಬಿಸಿ ಊಟ ವಲಸೆ ಕಾರ್ಮಿಕರಿಗೆ ದೊರೆಯುವಂತಾಗಿದೆ.