ವಿಜಯಪುರ:ಜತ್ತ, ಅಕ್ಕಲಕೋಟ ಹಾಗೂ ದಕ್ಷಿಣ ಸೊಲ್ಲಾಪುರ ತಾಲೂಕಿನ ಕನ್ನಡಿಗರ ಮೇಲೆ ಮರಾಠಿ ಭಾಷಾ ಕಡ್ಡಾಯಕ್ಕೆ ಠಾಕ್ರೆ ಸರ್ಕಾರ ಆದೇಶಿಸಿದೆ. ಇದನ್ನು ಖಂಡಿಸಿ ಗಡಿನಾಡ ಕನ್ನಡಿಗನೋರ್ವ ವಿಡಿಯೋ ಮಾಡಿ ಮಹಾರಾಷ್ಟ್ರದ ಕನ್ನಡ ವಿರೋಧಿ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಹಳ್ಳಿ ಎಂಬ ಗ್ರಾಮದ ಮಲ್ಲೆಶಪ್ಪ ತೀಲಿ ಎಂಬ ಗಡಿನಾಡು ಕನ್ನಡಿಗ ವಿಡಿಯೋ ಮಾಡಿ ಆಕ್ರೋಶ ಹೊರ ಹಾಕಿದ್ದಾನೆ. ಗಡಿ ಭಾಗದ ಯಾವ ಯಾವ ಹಳ್ಳಿಗಳಲ್ಲಿ ಶೇ 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಭಾಷಿಕರಿದ್ದಾರೋ ಆ ಹಳ್ಳಿಗಳಲ್ಲಿ ಮರಾಠಿ ಭಾಷೆ ಹೇರಿಕೆ ಮಾಡಬೇಕು ಎಂಬ ಆದೇಶವನ್ನು ಸರ್ಕಾರ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಹೊರಡಿಸಿದೆ ಎಂದು ತಿಳಿಸಿದರು.
ಜತ್ತ, ಅಕ್ಕಲಕೋಟೆ ಹಾಗೂ ದಕ್ಷಿಣ ಸೊಲ್ಲಾಪುರ ತಾಲೂಕಿನಲ್ಲಿ ಶೇ 50ಕ್ಕಿಂತ ಹೆಚ್ಚಿನ ಜನ ಕನ್ನಡಿಗರಿದ್ದಾರೆ. ಸಂವಿಧಾನದ 364 ಎ ಕಲಂ ಪ್ರಕಾರ ಎಲ್ಲೆಲ್ಲಿ ಶೇ 15ಕ್ಕಿಂತ ಹೆಚ್ಚು ಬೇರೆ ಭಾಷಿಕರಿದ್ದಾರೋ ಆ ಪ್ರದೇಶದಲ್ಲಿ ಅವರದ್ದೇ ಭಾಷೆಯಲ್ಲಿ ಕಾಗದ ಪತ್ರ ಕೊಡಬೇಕು ಎಂದು ಹೇಳಲಾಗಿದೆ. ಆದರೆ ಇದನ್ನು ಠಾಕ್ರೆ ಸರ್ಕಾರ ಮುರಿಯುತ್ತಿದೆ ಎಂದು ದೂರಿದರು.