ವಿಜಯಪುರ: ಜಿಲ್ಲೆಯಲ್ಲಿ ಇದುವರೆಗೂ 1705 ಶಂಕಿತರನ್ನು ನಿಗಾದಲ್ಲಿ ಇರಿಸಲಾಗಿದೆ. 378 ಜನರು 28 ದಿನದ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. ಇನ್ನೂ 1,325 ಜನ ಕ್ವಾರಂಟೈನ್‍ನಲ್ಲಿ ಇದ್ದಾರೆ. ಒಟ್ಟು 1,619 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, 1374 ನೆಗೆಟಿವ್ ಬಂದಿವೆ. 39 ಪಾಸಿಟಿವ್ ವರದಿ ಬಂದಿವೆ. ಇನ್ನೂ 206 ವರದಿ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಜಿಲ್ಲೆಯಲ್ಲಿ ಶನಿವಾರ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಈಗಾಗಲೇ ಸೋಂಕು ತಗುಲಿದವರ ಪ್ರಥಮ ಸಂಪರ್ಕದ 179 ಹಾಗೂ ದ್ವಿತೀಯ ಸಂಪರ್ಕದ 643 ಜನರು ಇದ್ದಾರೆ ಎಂದರು.
ಸೋಂಕಿತರ ಪ್ರಥಮ, ದ್ವಿತೀಯ ಸಂಪರ್ಕಿತರ ಗಂಟಲು ದ್ರವದ ಮಾದರಿ ನೆಗೆಟಿವ್ ಬಂದರೂ ಮುನ್ನೆಚ್ಚರಿಕೆ ಕ್ರಮವಾಗಿ ಅವರ ಕೈಗೆ ಸೀಲ್ ಹಾಕಿ ಹೋಂ ಕ್ವಾರೈಂಟ್‍ನಲ್ಲಿ ಇರಿಸಲಾಗಿದೆ. ಅಂಥವರ ಮನೆಯ 100 ಮೀಟರ್ ಪ್ರದೇಶದಲ್ಲಿ ಜಿಯೊ ಫೆನ್ಸಿಂಗ್ ಹಾಕಲಾಗುತ್ತದೆ. ಫೆನ್ಸಿಂಗ್‍ನಿಂದ ಹೊರ ಬಂದರೆ ಸರ್ಕಾರಕ್ಕೆ ಆ್ಯಪ್ ಮೂಲಕ ಗೊತ್ತಾಗುತ್ತದೆ. ಒಂದು ವೇಳೆ ಅವರು ಮೊಬೈಲ್ ಮನೆಯಲ್ಲಿ ಬಿಟ್ಟು ಬಂದರೆ ಸಿಬ್ಬಂದಿ ನಿಗಾ ವಹಿಸುತ್ತಾರೆ. ಜಿಯೊ ಫೆನ್ಸಿಂಗ್‍ನಿಂದ ಹೊರ ಬಂದ ಅಲ್ ಅಮೀನ್ ವೈದ್ಯ ಕಾಲೇಜಿನ ಮೂವರ ವಿರುದ್ಧ ಕೇಸ್ ಹಾಕಲಾಗಿದೆ ಎಂದರು.
ಸೋಂಕಿತರ ಸಂಪರ್ಕದ ಅಲ್ ಅಮೀನ್ ವೈದ್ಯ ಕಾಲೇಜಿನ 40 ಜನ ನೆಗೆಟಿವ್, ಬಾಂಗಿ ಆಸ್ಪತ್ರೆಯ 70 ಜನರ ಮಾದರಿ 2ನೇ ಬಾರಿ ನೆಗೆಟಿವ್ ಬಂದಿದೆ. ಅವರು ಹೋಂ ಕ್ವಾರಂಟೈನ್‍ನಲ್ಲಿ ಇದ್ದಾರೆ ಎಂದು ತಿಳಿಸಿದರು.
25 ಜನರ ವರದಿ ನೆಗೆಟಿವ್: ಪಾಸಿಟಿವ್ ಬಂದ ವೈದ್ಯ ವಿದ್ಯಾರ್ಥಿನಿಯ ಪ್ರಥಮ ಸಂಪರ್ಕದ 25 ಮಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಉಳಿದ ಪ್ರಥಮ ಹಾಗೂ ದ್ವಿತೀಯ ಸಂಪರ್ಕದವರ ಪತ್ತೆಗೆ 4 ತಂಡಗಳನ್ನು ರಚಿಸಲಾಗಿದೆ. ಬಿಎಲ್‍ಡಿಇ ಆಸ್ಪತ್ರೆಯ 40 ಹಾಸಿಗೆಯ 1 ಕಟ್ಟಡದ 100 ಮೀಟರ್ ಕಂಟೈನ್ಮೆಂಟ್ ಪ್ರದೇಶ ಆಗಿದೆ. ಇನ್ನುಳಿದ ಭಾಗದಲ್ಲಿ ಅಪಾಯವಿಲ್ಲ. ಹೀಗಾಗಿ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಭಯ ಇಲ್ಲದೆ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.