ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಘಟಕದಲ್ಲಿ ಸಿಬ್ಬಂದಿ ತಮ್ಮ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇಲ್ಲಿ ಬಾಣಂತಿಯರ ಪರಿಸ್ಥಿತಿ ಹೇಳತೀರದಾಗಿದೆ. ಸಿಝರಿಯನ್ ಮಾಡಿಸಿಕೊಂಡ ಬಾಣಂತಿಯರು ರಕ್ತಸ್ರಾವ ಸಮಸ್ಯೆ ಜೊತೆ ಹಾಕಿದ ಹೊಲಿಗೆ ಕಳಚಿಕೊಳ್ಳುತ್ತಿರುವುದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಷ್ಟಾದರೂ ಸಿಬ್ಬಂದಿ ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎನ್ನುವ ಆರೋಪವಿದೆ.
ಹಲವು ವರ್ಷಗಳ ಹಿಂದೆ - ತಾಯಿ ಮತ್ತು ಮಗುವಿನ ಚಿಕಿತ್ಸೆಗಾಗಿಯೇ ಪ್ರತ್ಯೇಕವಾಗಿ ತಾಯಿ ಮತ್ತು ಮಗುವಿನ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ. ಕೊವಿಡ್ ಸಮಯದಲ್ಲಿ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಆದರೀಗ ಗರ್ಭಿಣಿಯರು ಇಲ್ಲಿಗೆ ಬರಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೂಕ್ತ ಆರೈಕೆ ಸಿಗದೇ ಬಾಣಂತಿಯರು ಗುಣಮುಖರಾಗುತ್ತಿಲ್ಲ ಎನ್ನಲಾಗಿದೆ.