ವಿಜಯಪುರ : ಪಂಚರಾಜ್ಯ ಚುನಾವಣೆಯಲ್ಲಿ ಐದು ರಾಜ್ಯಗಳ ಪೈಕಿ ಕನಿಷ್ಠ ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿಯುತ್ತೇವೆ. ನಾಲ್ಕನೇ ಕಡೆಯೂ ಅಧಿಕಾರ ಹಿಡಿಯೋ ಸಾಧ್ಯತೆ ಇದೆ. ಎಕ್ಸಿಟ್ ಪೋಲ್ ನೋಡಿ ಗೊತ್ತಾಗುತ್ತದೆ ಎಂದು ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಅವರು ತಿಳಿಸಿದ್ದಾರೆ.
ಪಂಚ ರಾಜ್ಯ ಚುನಾವಣೆ ವಿಚಾರದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗುತ್ತಾ? ಎಂಬ ಮಾಧ್ಯಮದವರ ಪ್ರಶ್ನೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಮೋದಿ ವರ್ಚಸ್ಸು ಕಡಿಮೆಯಾಗುತ್ತಿದೆ ಎಂದು ನೀವೇ ಒಪ್ಪಿದ್ದೀರಲ್ಲ ಎಂದರು.
ಹೆಣ್ಣು ಭ್ರೂಣ ಹತ್ಯೆ ಅಕ್ಷಮ್ಯ: ಮೈಸೂರು ಹಾಗೂ ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಮಕ್ಕಳ ಮಾರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಇದು ಅತ್ಯಂತ ಅಕ್ಷಮ್ಯ ಹಾಗೂ ಹೀನಾಯ ಕೆಲಸ. ಇದನ್ನು ವೈದ್ಯರು ಕೂಡಾ ಶಾಮೀಲಾಗಿ ಮಾಡುತ್ತಿರುವುದು ಅಪರಾಧ. ಯಾವುದೇ ಸರ್ಕಾರವಿದ್ದರೂ ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಇಂಥ ಕೆಲಸ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದನ್ನು ತಡೆಗಟ್ಟಲು ಸರ್ಕಾರ ಬದ್ಧ. ಯಾರೇ ಹೆಣ್ಣು ಭ್ರೂಣ ಹತ್ಯೆ ಮಾಡಿದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಹೇಳಿದರು.
ವಿಜಯಪುರದ ಕಂದಗಲ್ ಹನಮಂತರಾಯ ರಂಗಮಂದಿರದಲ್ಲಿ ಕನಕದಾಸ ಜಯಂತಿ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. 12ನೇ ಶತಮಾನದಲ್ಲೇ ಬಸವಣ್ಣ ಹಾಗೂ ಶರಣರು ಗಂಡು ಹೆಣ್ಣು ಭೇದಭಾವ ಅಳಿಸಿ ಹಾಕಿದ್ದರು. ಹೆಣ್ಣು ಲಕ್ಷ್ಮೀ ಇದ್ದಂಗೆ. ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳೇ ಒಳ್ಳೆಯವರು. ತಂದೆ ತಾಯಂದಿರನ್ನು ಸಾಕುವವರು ಅವರೇ ಎಂದು ಹೇಳಿದರು. ವಿಜಯಪುರ ಜಿಲ್ಲೆಯಲ್ಲಿಯೂ ಇಂಥ ಕೆಲಸ ಮಾಡಲು ಬಿಡಲ್ಲ. ಜನರಲ್ಲೂ ಜಾಗೃತಿ ಮೂಡಬೇಕಿದೆ. ಇಂಥ ಘಟನೆ ತಡೆಯಲು ವಿಶೇಷ ತಂಡ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೈಗಾರಿಕೆಗಳು ಬೆಳೆಯಲು ಅವಕಾಶ ನೀಡಲಾಗುತ್ತದೆ : ರಾಜ್ಯದಲ್ಲಿ ಕೈಗಾರಿಕೆಗೆ ಉತ್ತೇಜನ ವಿಚಾರವಾಗಿ ಮಾತನಾಡಿ, ರಾಜ್ಯದ ಇತರೆ ಭಾಗಗಳಲ್ಲಿ ಕೈಗಾರಿಕೆಗಳು ಬೆಳೆಯಲು ಅವಕಾಶ ನೀಡಲಾಗುತ್ತದೆ. ಇನ್ಸೆಂಟಿವ್ ನೀಡುವ ಮೂಲಕ ಕೈಗಾರಿಕೆ ಹಾಗೂ ಬಂಡವಾಳ ಹರಿದು ಬರಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಸದ್ಯ ನಾವು ಕ್ಲಿಷ್ಟಕರ ವಾತಾವರಣದಲ್ಲಿದ್ದೇವೆ. ಇಂಡಸ್ಟ್ರೀಸ್ ಸ್ಥಾಪನೆಗೆ ಬೆಂಗಳೂರು ಸುತ್ತಮುತ್ತ ಬಯಸುತ್ತಾರೆ. ನಾವು ಬೆಂಗಳೂರು ಹೊರತು ಪಡಿಸಿ ಸ್ಥಾಪನೆ ಮಾಡಲು ಮನವೊಲಿಸುತ್ತೇವೆ. ಅದಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು, ಪ್ರೋತ್ಸಾಹವನ್ನು ನೀಡುತ್ತೇವೆ. ಜೊತೆಗೆ ಬಂಡವಾಳ ಹಾಕುವವರು, ಕೈಗಾರಿಕೆಗಳು ರಾಜ್ಯ ಬಿಟ್ಟು ಹೋಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ವಿಜಯಪುರ ಜಿಲ್ಲೆಯಲ್ಲಿ ಎಲ್ಲಾ ಸೌಕರ್ಯವಿದೆ. ಭೂಮಿ, ನೀರು, ವಿದ್ಯುತ್, ಸಾರಿಗೆ ಇದೆ. ಇದೆಲ್ಲ ಮನವರಿಕೆ ಮಾಡುತ್ತೇವೆ. ಈ ಕುರಿತು ಅಧ್ಯಯನವನ್ನು ಸಹ ಮಾಡಿಸಲಾಗಿದೆ ಎಂದು ಹೇಳಿದರು.