ಮುದ್ದೇಬಿಹಾಳ: ಜಮೀನುಗಳಿಗೆ ನೀರು ಹರಿಯಲಿದೆ ಎಂಬ ಅಪೇಕ್ಷೆಯಿಂದ ಸರ್ಕಾರದ ನೀರಾವರಿ ಯೋಜನೆಗೆ ಜಮೀನು ನೀಡಿದ್ದ ರೈತರು, ಕಾಮಗಾರಿ ನೆನೆಗುದಿಗೆ ಬಿದ್ದ ಹಿನ್ನೆಲೆಯಲ್ಲಿ ನೀರು ಇಲ್ಲದೇ ಕಳೆದುಕೊಂಡ ಜಮೀನಿಗೆ ಪರಿಹಾರವೂ ದೊರೆಯದೇ ಕಂಗಾಲಾಗಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ಚಿಮ್ಮಲಗಿ ಪೂರ್ವ ಕಾಲುವೆಯ ವಿತರಣಾ ಕಾಲುವೆ ಸಂ.1ರ ಕಿ.ಮೀ 13.304 ರಿಂದ ಕಿ.ಮೀ 22.966 ರವರೆಗೆ ಕಾಲುವೆ ನಿರ್ಮಾಣದ ಕುರಿತು ಈಗಾಗಲೇ ಭೂ ಸ್ವಾಧೀನಪಡಿಸಿಕೊಂಡು ಕಾಮಗಾರಿ ನಡೆಸಲಾಗಿತ್ತು. ಆದರೆ ಕೆಲವು ಗ್ರಾಮಗಳಲ್ಲಿ ರೈತರು ತಡೆಯೊಡ್ಡಿದ ಕಾರಣ ನಿರೀಕ್ಷಿತ ಸಾಧನೆ ಆಗದೇ ಕಾಲುವೆ ಕಾಮಗಾರಿ ಐದಾರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇತ್ತ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಧನ ಸಹ ಸಿಕ್ಕಿಲ್ಲ. ಹೀಗಾಗಿ ಬೇಸತ್ತ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ವ್ಯಾಪ್ತಿ:ಈ ಯೋಜನೆಯಡಿ ಮುದ್ದೇಬಿಹಾಳ ತಾಲೂಕಿನ ಅರಸನಾಳ,ನೆರಬೆಂಚಿ,ಜೈನಾಪೂರ,ನಾಲತವಾಡ ಖಿಲಾರಹಟ್ಟಿ, ಮಾವಿನಬಾವಿ, ನಾಗಬೇನಾಳ,ಆರೇಶಂಕರ,ವೀರೇಶನಗರ ಹಾಗೂ ನಾಗಬೇನಾಳ ಭಾಗದ ಕೆಲವು ಜಮೀನುಗಳು ಬರುತ್ತವೆ. ಅಂದಾಜು 300-400 ರೈತರು ಈ ಯೋಜನೆಯ ಕಾಲುವೆಯ ಸಲುವಾಗಿ ಜಮೀನು ತ್ಯಾಗ ಮಾಡಿದ್ದಾರೆ. ಆದರೆ ಅಧಿಕಾರಿಗಳು ಎಲ್ಲೆಲ್ಲಿ ಕೆಲಸ ಸ್ಥಗಿತವಾಗಿದೆಯೋ ಅಲ್ಲಿ ರೈತರ ಮನವೊಲಿಸಿ ಕಾಮಗಾರಿ ಚಾಲನೆ ಮಾಡುವ ಕಾರ್ಯಕ್ಕೆ ಮುಂದಾಗಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬಂದಿವೆ.
ಕರವೇ ಬೆಂಬಲ: ರೈತರ ಹೋರಾಟಕ್ಕೆ ನಾವು ಸದಾ ಮುಂಚೂಣಿಯಲ್ಲಿ ನಿಂತು ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ನಾಲತವಾಡ ಘಟಕದ ಅಧ್ಯಕ್ಷ ಮಲ್ಲು ಗಂಗನಗೌಡರ ತಿಳಿಸಿದ್ದಾರೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಕಾಲುವೆಯ ಕಾಮಗಾರಿಗೆ ಇರುವ ಅಡಚಣೆಗಳು ಇನ್ನಾದರೂ ದೂರವಾಗಿ ಕೆಲಸ ಆರಂಭವಾಗಬೇಕು.ಇಲ್ಲದಿದ್ದಲ್ಲಿ ರೈತರೊಂದಿಗೆ ಬೀದಿಗಿಳಿದು ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಮಾಹಿತಿ ಹೊಂದಿರುವ ನಾಗರಬೆಟ್ಟದ ನ್ಯಾಯವಾದಿ ಎಸ್.ಎಸ್.ಪಾಟೀಲ ಹೇಳುವ ಪ್ರಕಾರ, ಈ ಕಾಲುವೆಯ 13ಎ ಅಡಿಯಲ್ಲಿ ಬರುವ ಎಲ್ಲಾ ಜಮೀನುಗಳ ಮಾಲೀಕರಿಗೆ 4(1) ನೋಟಿಸ್ ನೀಡಲಾಗಿದೆ. ಹೆಚ್ಚು ಕಡಿಮೆ ಮುಖ್ಯಕಾಲುವೆ ಅಡಿ ಕಾಮಗಾರಿ ಪೂರ್ಣಗೊಳಿಸಿರುವ ಭಾಗದ ಭಾಗಶಃ ರೈತರಿಗೆ ಪರಿಹಾರವೂ ಸಿಕ್ಕಿದೆ.ಆದರೆ ಉಪ ಕಾಲುವೆ, ಹೊಲಗಾಲುವೆಗಳಿಗೆಂದು ಭೂಮಿ ಕಳೆದುಕೊಂಡಿರುವ ಜಮೀನುಗಳ ಮಾಲೀಕರಿಗೆ ಪರಿಹಾರ ಸಿಕ್ಕಿಲ್ಲ.ಅಲ್ಲದೇ ಕಾಲುವೆಯ ಕಾಮಗಾರಿಯೂ ಅಲ್ಲಲ್ಲಿ ಅರ್ಧಕ್ಕೆ ನಿಂತಿದ್ದು ರೈತರ ನೀರಾವರಿ ಕನಸನ್ನು ಭಗ್ನಗೊಳಿಸಿದೆ ಎಂದು ಹೇಳಿದರು.
ಸದ್ಯಕ್ಕೆ ರೈತರು ಹೇಳುವುದೇನು: ಸಿದ್ಧರಾಮಯ್ಯ ಸರ್ಕಾರದಲ್ಲಿ ಈ ಯೋಜನೆಗೆ ಮಂಜೂರಾತಿ ಸಿಕ್ಕಿತ್ತು.ಆದರೆ ಹಿಂದೆ ಇದ್ದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಕಾಲುವೆ ಕಾಮಗಾರಿ ಪೂರ್ಣಗೊಳಿಸಿ ನೀರು ತರುವ ಕೆಲಸವನ್ನು ಮಾಡಲಿಲ್ಲ.ಅವರಿಂದ ಆಗದ ಕೆಲಸವನ್ನು ಮುಂದೆ ಹೊಸಬರಾದರೂ ಮಾಡುತ್ತಾರೆ ಎಂಬ ಆಶಾಭಾವನೆಯಿಂದ ಈಗ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದೇವೆ. ಈಗಾದರೂ ಆ ಮೂಲಕ ಭೂಮಿ ಕಳೆದುಕೊಂಡಿರುವ ನೂರಾರು ರೈತರ ಜಮೀನುಗಳಿಗೆ ನೀರು ಹರಿಸುವ ಕೆಲಸವನ್ನು ಮಾಡಬೇಕಿದೆ ಎಂಬ ಆಶಾಭಾವನೆಯನ್ನು ಇಟ್ಟುಕೊಂಡಿದ್ದಾರೆ.
ಹೋರಾಟದ ಎಚ್ಚರಿಕೆ ನೀಡಿದ ಅನ್ನದಾತರು: ಮುದ್ದೇಬಿಹಾಳ ತಾಲೂಕಿನ ಚಿಮ್ಮಲಗಿ ಪೂರ್ವ ಕಾಲುವೆಯ ಕಾಮಗಾರಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕಾಮಗಾರಿ ಆರಂಭಿಸದಿದ್ದರೆ ರೈತರು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆಎಂದು ರೈತರು ಎಚ್ಚರಿಸಿದ್ದಾರೆ.