ವಿಜಯಪುರ:ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಜೆಡಿಎಸ್ ಶಾಸಕರೊಬ್ಬರ ಹೆಸರು ಈಗ ತಳುಕು ಹಾಕಿಕೊಂಡಿದೆ.
ಆಯುಕ್ತರ ಮೇಲೆ ಹಲ್ಲೆ ನಡೆಸಿದ ಪುಂಡರು ಶಾಸಕ ದೇವಾನಂದ ಚೌಹಾಣ್ ಹೆಸರು ಹೇಳಿ ತಮಗೆ ಧಮ್ಕಿ ಹಾಕಿದ್ದಾರೆ ಎಂದು ಖುದ್ದು ಹಲ್ಲೆಗೊಳಗಾದ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಹೇಳಿಕೆ ನೀಡಿರುವುದು ಮತ್ತೊಮ್ಮೆ ಜನಪ್ರತಿನಿಧಿ ಹಾಗೂ ಅಧಿಕಾರಿ ವರ್ಗದ ನಡುವಿನ ಮುಸುಕಿನ ಗುದ್ದಾಟ ಬಹಿರಂಗಗೊಂಡಿದೆ.
ವಿಜಯಪುರ ನಗರದ ಸೂಕೂನ ಬಡಾವಣೆಯ ಬಳಮಕರ ಕಲ್ಯಾಣ ಮಂಟಪ ಬಳಿ ಆಯುಕ್ತ ವಿಜಯ ಮೆಕ್ಕಳಕಿ ರಸ್ತೆ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ ಆಯುಕ್ತರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಆಯುಕ್ತರೇ ಸ್ವಲ್ಪ ನಿಧಾನವಾಗಿ ವಾಹನ ಓಡಿಸು ಎಂದು ಬುದ್ಧಿವಾದ ಹೇಳಿದ್ದಾರೆ.
ಅದಕ್ಕೆ ಕೋಪಗೊಂಡ ಆ ವ್ಯಕ್ತಿ ವಾಗ್ವಾದ ನಡೆಸಿದ್ದಾನೆ. ಅಷ್ಟರಲ್ಲಿ ನಾಲ್ಕೈದು ಜನ ಕಾರಿನಲ್ಲಿ ಬಂದು ಆಯುಕ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಹೊಟ್ಟೆಗೆ ಕಾಲಿನಿಂದ ಒದ್ದಿದ್ದಾರೆ. ಅಲ್ಲಿಯೇ ಇದ್ದ ಜನರು ಇದನ್ನು ತಡೆಯಲು ಬಂದಾಗ ಅವರ ಮೇಲೂ ಹಲ್ಲೆಗೆ ಮುಂದಾದರು.