ವಿಜಯಪುರ: ಈ ಬಾರಿ ಕಡು ಬಿಸಿಲಿನೊಂದಿಗೆ ರಂಜಾನ್ ತಿಂಗಳು ಆರಂಭವಾಗಿದ್ದರಿಂದ ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದ್ದು, ಬೇಸಿಗೆ ಬಿಸಿಲಿನ ತಾಪಮಾನವನ್ನು ಲೆಕ್ಕಿಸದೆ ಮುಸ್ಲಿಂ ಬಾಂಧವರು ರಂಜಾನ್ ತಿಂಗಳ ಉಪವಾಸ ಆಚರಣೆಯಲ್ಲಿ ನಿರತರಾಗಿದ್ದಾರೆ.
ರಂಜಾನ್ ಮಾಸದಲ್ಲಿ ಹಣ್ಣುಗಳಿಗೆ ಹೆಚ್ಚಿದ ಬೇಡಿಕೆ ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರು ಉಪವಾಸ, ನಮಾಜ್, ಪ್ರಾರ್ಥನೆ ಪುಣ್ಯ ಕಾರ್ಯಗಳತ್ತ ಹೆಚ್ಚು ಒಲವು ತೋರಿರುತ್ತಾರೆ. ಈಗ ಎಲ್ಲರ ಮನೆಯಲ್ಲಿಯೂ ಸಂಭ್ರಮ ಮನೆ ಮಾಡಿದ್ದು, ಮಕ್ಕಳಾಗಲಿ, ವೃದ್ಧರಾಗಲಿ ಎಲ್ಲರೂ ಉಪವಾಸವನ್ನು ಹುಮ್ಮಸ್ಸಿನಿಂದಲೇ ಮಾಡುತ್ತಿದ್ದಾರೆ. ದಿನವೆಲ್ಲ ನೀರು ಕುಡಿಯದೇ ಉಪವಾಸ ಮಾಡಿ, ಸಂಜೆ ಪ್ರಾರ್ಥನೆ ನಂತರ ಸಾಮೂಹಿಕವಾಗಿ ಉಪವಾಸ ತ್ಯಜಿಸುತ್ತಾರೆ. ವ್ರತ ಬಿಡುವಾಗ ಹಣ್ಣಿನ ರಸ, ಹಣ್ಣು ಸೇವಿಸುವುದರಿಂದ ಹಣ್ಣಿಗೆ ಮತ್ತಷ್ಟು ಬೇಡಿಕೆ ಸಿಕ್ಕಿದೆ.
ಈ ಬಾರಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ಹಣ್ಣಿನ ದರ ಮತ್ತಷ್ಟು ಗಗನಕ್ಕೇರಿದೆ. ಅದರಲ್ಲೂ ನೀರಿನಾಂಶವುಳ್ಳ ಕಲ್ಲಂಗಡಿ ರಂಜಾನ್ ತಿಂಗಳಲ್ಲಿ ಹೆಚ್ಚು ಮಾರಾಟವಾಗುತ್ತಿದೆ. 20-25 ರೂ.ಗೆ ಕೆಜಿಯಂತೆ ಬೇಡಿಕೆ ಹೆಚ್ಚಿಸಿಕೊಂಡಿದೆ. ಕರಬೂಜ 50 ರೂ., ಬಾಳೆಹಣ್ಣು 50 ರಿಂದ 120, ಸೇಬುಕೆಜಿ ಗೆ250-350 ರೂ. ಇದೆ. ಹಾಗೆಯೇ ಖರ್ಜೂರ ಕೂಡ ಹೇರಳವಾಗಿ ಮಾರಾಟವಾಗುತ್ತಿದೆ.
ಇನ್ನು ಮನಸ್ಸನ್ನು ನಿಗ್ರಹಿಸುವುದನ್ನು ಕಲಿಸುವ ಈ ಹಬ್ಬವು ದಾನ-ಧರ್ಮ, ಸಾಮರಸ್ಯವನ್ನೂ ಸಹ ಬೋಧಿಸುತ್ತದೆ. ಹೀಗಾಗಿ ಸಾಮೂಹಿಕವಾಗಿ ಉಪವಾಸ ತ್ಯಜಿಸಲು ಇಫ್ತಾರಕೂಟಗಳನ್ನು ಆಯೋಜಿಸಿ, ದಾನಿಗಳು ಹಣ್ಣು-ತಿಂಡಿ ಪದಾರ್ಥದ ವ್ಯವಸ್ಥೆ ಕೂಡ ಮಾಡಿರುತ್ತಾರೆ. ಸಂಜೆಯಾದಂತೆ ನಗರದ ಕೆಲವು ಹೋಟೆಲ್ಗಳಲ್ಲಿ ತಯಾರಾಗಿರುವ ವಿವಿಧ ಬಗೆಯ ತಿಂಡಿ ಪದಾರ್ಥಗಳನ್ನು ಖರೀದಿಸಿ ಬ್ಯಾಗ್ನೊಂದಿಗೆ ಎಲ್ಲರೂ ಮನೆಯತ್ತ ತೆರಳಿದರೆ, ಕೆಲವರು ಮಸೀದಿಯತ್ತ ಹೆಜ್ಜೆ ಹಾಕುತ್ತಾರೆ.
ಒಟ್ಟಿನಲ್ಲಿ ರಂಜಾನ್ ಹಬ್ಬದ ನಿಮಿತ್ತ ಮನೆಯಲ್ಲಿ ಹಿರಿಯ-ಕಿರಿಯರು ಎಲ್ಲರೂ ಸಂಭ್ರಮದಿಂದ ತಿಂಗಳೆಲ್ಲ ಉಪವಾಸ ಮಾಡುತ್ತಾರೆ. ಕರ್ಮಗಳನ್ನು ಕಳೆದುಕೊಂಡು ಭಗವಂತನನ್ನು ಸ್ಮರಿಸಿ, ಪುಣ್ಯ ಸಂಪಾದಿಸಿಕೊಳ್ಳಲು ಇದು ಸೂಕ್ತ ಕಾಲ. ಹೀಗಾಗಿ ಉಪವಾಸ ಬಿಡುವಾಗ ಹಣ್ಣುಗಳು ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿವೆ.