ವಿಜಯಪುರ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿ, ಒಳಮೀಸಲಾತಿಯ ಜಾರಿ ಮಾಡುತ್ತೇವೆಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿ ಆರಿಸಿ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಏಳು ತಿಂಗಳು ಗತಿಸಿದರೂ ಆ ಕುರಿತು ನೆನಪಿಲ್ಲ. ಸಮಾಜದ ಸಚಿವರಾದ ಕೆ.ಎಚ್.ಮುನಿಯಪ್ಪ ಹಾಗೂ ಆರ್.ಬಿ.ತಿಮ್ಮಾಪೂರ ಅವರಿಗೆ ಸ್ವಾಭಿಮಾನವೇ ಇಲ್ಲ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಸರ್ಕಾರದ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಭಾನುವಾರ 'ರಾಜ್ಯದ ಎಲ್ಲಡೆ ಮಾದಿಗ ಮುನ್ನಡೆ' ಎಂಬ ಘೋಷವಾಕ್ಯದೊಂದಿಗೆ ಮಾದಿಗರ ಆತ್ಮಗೌರವ ಸಮಾವೇಶ ನಡೆಯಿತು. ವೇದಿಕೆಯಲ್ಲಿ ಮಾತನಾಡಿದ ಕಾರಜೋಳ, ದಲಿತರಾದ ಖರ್ಗೆಯವರಿಗೆ ಹಲವಾರು ಬಾರಿ ಸಿಎಂ ಆಗುವ ಅವಕಾಶ ಇದ್ದರೂ ಅವಕಾಶ ವಂಚಿತರನ್ನಾಗಿ ಮಾಡಿದ ಕಾಂಗ್ರೆಸ್ ಪಕ್ಷ ಇದೀಗ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದೆ. ಸಾಮಾಜಿಕ ನ್ಯಾಯ ಸಿಗುವುದೇನಿದ್ದರೂ ಅದು ಮೋದಿ, ಬಿಜೆಪಿ ಮತ್ತು ಸಂಘ ಪರಿವಾರದ ಸಹಕಾರದಿಂದ ಮಾತ್ರ ಸಾಧ್ಯ ಎಂದರು.
ಸದಾಶಿವ ಆಯೋಗದ ಜಾರಿ, ಒಳಮೀಸಲಾತಿ ಜಾರಿ ಮಾಡುವುದಾಗಿ ಹೇಳಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಅದರ ಚುಕ್ಕಾಣಿ ಹಿಡಿದಿರುವ ಸಿಎಂ, ಡಿಸಿಎಂ ಅವರಿಗೆ ಅದರ ನೆನಪೇ ಇಲ್ಲ. ಅದರಲ್ಲೂ ಸಮಾಜದ ಸಚಿವರಾದ ಕೆ.ಎಚ್.ಮುನಿಯಪ್ಪ ಹಾಗೂ ಆರ್.ಬಿ.ತಿಮ್ಮಾಪೂರ ಕೇವಲ ಅಧಿಕಾರ ಕಳೆದುಕೊಂಡಾಗ ಮಾತ್ರ ಮಾದಿಗ ಸಮಾಜ, ಅವರ ಸಮಾಜ ಬಾಂಧವರು, ಸಾಮಾಜಿಕ ನ್ಯಾಯ ನೆನಪಾಗುತ್ತದೆ ಎಂದು ಟೀಕಿಸಿದರು.