ವಿಜಯಪುರ: ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಮತ್ತೊಮ್ಮೆ ಭಿನ್ನಮತ ಭುಗಿಲೆದ್ದಿದ್ದು, ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯದ ಬಾವುಟ ಬೀಸಿದ್ದಾರೆ.
ತೆನೆ ಹೊತ್ತ ಮೇಯರ್: ಕಳೆದ ಬಾರಿ ಬಿಜೆಪಿಯಿಂದ ಆಯ್ಕೆಯಾಗಿ ಮೇಯರ್ ಪಟ್ಟ ಅಲಂಕರಿಸಿದ್ದ ಸಂಗೀತಾ ಪೋಳ ಹಾಗೂ ಉಪಮೇಯರ್ ಆಗಿದ್ದ ಆನಂದ ಧುಮಾಳೆಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್ ಪಕ್ಷ ಸೇರ್ಪಡೆಗೊಂಡು ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವ ವಾರ್ಡ್ ನಂ.33ಗೆ ಸಂಗೀತಾ ಪೋಳ ಹಾಗೂ ಹಿಂದುಳಿದ ವರ್ಗ ಕ್ಕೆ ಮೀಸಲಾಗಿರುವ ವಾರ್ಡ್ ನಂ 30ಕ್ಕೆ ಆನಂದ ಧುಮಾಳೆ ಜೆಡಿಎಸ್ ಪರ ನಾಮಪತ್ರ ಸಲ್ಲಿಸಿದ್ದಾರೆ.
ವಾರ್ಡ್ 22ರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರವಿಕಾಂತ ಬಗಲಿ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ತನ್ನ ಬೆಂಬಲಿಗರೊಂದಿಗೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಈಗ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿರುವ ಪ್ರೇಮಾನಂದ ಬಿರಾದಾರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಪಕ್ಷದ ಹಿರಿಯ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ನನಗೆ ಟಿಕೆಟ್ ತಪ್ಪಿಸಿದ ಮುಖಂಡರ ಹೆಸರನ್ನು ಸದ್ಯದಲ್ಲಿ ಬಹಿರಂಗ ಪಡಿಸುವೆ. ಜೆಡಿಎಸ್ನಿಂದ ಬಂದಿರುವ ಬಿಜೆಪಿ ಅಭ್ಯರ್ಥಿ ಪ್ರೇಮಾನಂದ ಬಿರಾದಾರ ಅದೇ ನಾಯಕನ ಕೃಪಾ ಕಟಾಕ್ಷದಿಂದ ಟಿಕೆಟ್ ಪಡೆದುಕೊಂಡಿದ್ದಾರೆ.
ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದಿದ್ದಾರೆ ಅಥವಾ ಇಲ್ಲವೋ ಎನ್ನುವದೇ ಯಾರಿಗೂ ಗೊತ್ತಿಲ್ಲ, ಅಂಥವರಿಗೆ ಮಣೆ ಹಾಕಿ, ನಿಷ್ಟಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ ಎಂದು ರವಿಕಾಂತ ಬಗಲಿ ಆರೋಪಿಸಿದ್ದಾರೆ. ಕೆಲ ಅತೃಪ್ತ ಟಿಕೆಟ್ ಆಕಾಂಕ್ಷಿಗಳು ಸದ್ಯ ತಮ್ಮ ಮುಖಂಡರ ಮಾತಿಗೆ ಬೆಲೆ ಕೊಟ್ಟು ಸುಮ್ಮನಾಗಿದ್ದರೂ ಸಹ ತೆರೆಮರೆಯಲ್ಲಿ ಅಧಿಕೃತ ಅಭ್ಯರ್ಥಿ ವಿರುದ್ಧ ಕತ್ತಿ ಮಸಿಯುತ್ತಿದ್ದಾರೆ. ಬಿಜೆಪಿಯ ಹಿರಿಯ ಮುಖಂಡರಾದ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ, ಸಂಸದ ರಮೇಶ ಜಿಗಜಿಣಗಿ ಹಾಗೂ ಪಕ್ಕದ ಜಿಲ್ಲೆಯ ಮುಖಂಡ ಹಾಗೂ ಸಚಿವ ಗೋವಿಂದ ಕಾರಜೋಳ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸರ್ವ ಪ್ರಯತ್ನ ನಡೆಸಿದ್ದಾರೆ. ಆದರೆ ಮೇಲ್ನೋಟಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಟಿಕೆಟ್ ಕೊಡಿಸಲು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.