ವಿಜಯಪುರ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾದ ಆರೋಪ ಕೇಳಿ ಬಂದ ಹಿನ್ನೆಲೆ ಟಿಹೆಚ್ಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಅಧಿಕಾರಿಗಳು ಬರುತ್ತಿದ್ದಂತೆ ಆಸ್ಪತ್ರೆಗೆ ಬೀಗ ಜಡಿದು ಕಾಲ್ಕಿತ್ತ ನಕಲಿ ವೈದ್ಯ! - kannadanews
ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಾಗಿರುವ ನಕಲಿ ವೈದ್ಯರ ಹಾವಳಿ ನಿಯಂತ್ರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.
ಮುದ್ದೇಬಿಹಾಳ ನಗರದಲ್ಲಿ ನಕಲಿ ವೈದ್ಯರು ಇದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಇಂದು ಟಿಹೆಚ್ಒ ತಿವಾರಿ ನಗರದ ಇಂದಿರಾ ಸರ್ಕಲ್ ಬಳಿ ಇರುವ ಖಾಸಗಿ ಆಸ್ಪತ್ರೆಯ ಮೇಲೆ ದಾಳಿ ನಡೆಸಿದರು. ಆದ್ರೆ ಮೊದಲೇ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಂಡಿದ್ದ ಆ ನಕಲಿ ವೈದ್ಯ ಆಸ್ಪತ್ರೆಗೆ ಹಾಕಿದ್ದ ನಾಮ ಫಲಕ ಸಮೇತ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಇನ್ನು ಪರಿಶೀಲನೆಗೆ ಆಗಮಿಸಿದ ಟಿಹೆಚ್ಒ ಆಸ್ಪತ್ರೆ ಬಗ್ಗೆ ಮಾಹಿತಿ ಪಡೆದುಕೊಂಡು ಈ ವೈದ್ಯನ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದರು.
ಇನ್ನು ಮೂಲಗಳ ಪ್ರಕಾರ ಡಾ. ಎ.ಹೆಚ್.ತಾರಗಾರ ನಕಲಿ ದಾಖಲೆಗಳನ್ನು ಇಟ್ಟುಕೊಂಡು ಆಸ್ಪತ್ರೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಸ್ಥಳೀಯ ತಾಲೂಕು ವೈಧ್ಯಾಧಿಕಾರಿಗಳು ನಕಲಿ ವೈದ್ಯರ ವೀಕ್ಷಣೆ ಮಾಡಿ ಕ್ರಮ ಕೈಗೊಳ್ಳಲು ಬರುತ್ತಿರುವ ಸುಳಿವು ತಿಳಿದು ತಾರಗಾರ ತನ್ನ ಆಸ್ಪತ್ರೆಗೆ ಹಾಕಿದ್ದ ನಾಮ ಫಲಕ ಕಿತ್ತು ಹಾಕಿ ಆಸ್ಪತ್ರೆಗೆ ಬೀಗ ಜಡಿದು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.