ವಿಜಯಪುರ : ಬಜೆಟ್ ಮಂಡನೆಗೆ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಹಜವಾಗಿ ರಾಜ್ಯದ ಜನರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಐತಿಹಾಸಿಕ ಪ್ರವಾಸೋದ್ಯಮ ಅವಲಂಬಿತ ವಿಜಯಪುರ ಜಿಲ್ಲೆಯ ನಿರೀಕ್ಷೆಗಳು ಹೆಚ್ಚಾಗಿಯೇ ಇವೆ.
ಕೊರೊನಾದಿಂದ ಪ್ರವಾಸೋದ್ಯಮದ ಮೇಲೆ ಬಿದ್ದ ಹೊಡೆತದಿಂದ ಇನ್ನೂ ಜಿಲ್ಲೆ ಚೇತರಿಸಿಕೊಂಡಿಲ್ಲ. ಪಂಚ ನದಿಗಳ ಬೀಡಾಗಿರುವ ವಿಜಯಪುರ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ ಸಾವಿರಾರೂ ಕೋಟಿ ರೂ.ಬಿಡುಗಡೆ ಮಾಡುವುದಾಗಿ ಹೇಳಿ ಎರಡೂ ರಾಷ್ಟ್ರೀಯ ಪಕ್ಷಗಳು ಅಧಿಕಾರ ಅನುಭವಿಸಿವೆ. ಹೀಗಾಗಿ, ಈ ಬಾರಿಯ ಬಜೆಟ್ನಲ್ಲಾದರೂ ಬೇಡಿಕೆ ಈಡೇರುತ್ತಾ ಎಂಬ ನಿರೀಕ್ಷೆ ಜಿಲ್ಲೆಯ ಜನರಲ್ಲಿದೆ.
ರಾಜ್ಯ ಬಜೆಟ್ನತ್ತ ವಿಜಯಪುರ ಜನರ ಚಿತ್ತ 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್, 'ಕಾಂಗ್ರೆಸ್ ನಡಿಗೆ ಕೃಷ್ಣೆಯ ಕೊಳ್ಳದ ಕಡೆಗೆ' ಎಂಬ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂತು. ಪಾದಯಾತ್ರೆ ವೇಳೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಮೀಸಲಿಡುವುದಾಗಿ ಕಾಂಗ್ರೆಸ್ ಹೇಳಿತ್ತು. ನಂತರ 2018ರ ಚುನಾವಣೆಯಲ್ಲಿಯೂ ಕೃಷ್ಣೆಯ ಹೆಸರು ಹೇಳಿ ಎರಡು ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೆ ಬರಲು ಪ್ರಯತ್ನಿಸಿ ವಿಫಲವಾಗಿವೆ. ಈಗ ರಾಜಕೀಯ ಮೇಲಾಟದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯಲ್ಲಿದ್ದು, ಈ ಬಾರಿ ಮಂಡಿಸಲಿರುವ ಬಜೆಟ್ನಲ್ಲಿ ಬಹುಪಾಲು ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗೆ ಮೀಸಲಿಟ್ಟು, ಜಿಲ್ಲೆಯನ್ನು ನೀರಾವರಿಗೆ ಒಳಪಡಿಸಬೇಕಾಗಿದೆ. ಇದರ ಜತೆ ನಾಗಠಾಣದ ರೇವಣಸಿದ್ದೇಶ್ವರ ಏತನೀರಾವರಿ ಯೋಜನೆ ಅನುದಾನವಿಲ್ಲದೆ ನೆನೆಗುದಿಗೆ ಬಿದ್ದಿದೆ. ಅದರ ಪುನಶ್ಚೇತನಕ್ಜೆ 700 ಕೋಟಿ ರೂ.ಗಳ ಅನುದಾನದ ಅವಶ್ಯಕತೆ ಇದೆ. ಈ ಯೋಜನೆ ಜಾರಿಯಾದರೆ ಇಂಡಿ, ಚಡಚಣ, ನಾಗಠಾಣ ಸೇರಿದಂತೆ ಭೀಮಾತೀರದ 8 ಕೆರೆಗಳಿಗೆ ನೀರು ಹರಿಸಿ ದ್ರಾಕ್ಷಿ ಹಾಗೂ ನಿಂಬೆ ಬೆಳೆಗೆ ಉತ್ತೇಜನ ನೀಡಬಹುದು.
ಪ್ರವಾಸೋದ್ಯಮ ಉತ್ತೇಜನಕ್ಕೆ ಅತ್ಯವಶ್ಯಕವಾಗಿ ಬೇಕಿದ್ದ ವಿಮಾನ ನಿಲ್ದಾಣದ ಕಾಮಗಾರಿ ಕೊನೆಗೂ ಎರಡು ದಶಕಗಳ ನಂತರ ಆರಂಭಗೊಂಡಿದೆ. ಮೊದಲ ಹಂತದಲ್ಲಿ 95 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟು 220 ಕೋಟಿ ರೂ. ವೆಚ್ಚದಲ್ಲಿ ಈ ವಿಮಾನ ನಿಲ್ದಾಣ ಕಾಮಗಾರಿ ಎರಡು ಹಂತಗಳಲ್ಲಿ ಪೂರ್ಣಗೊಳ್ಳಬೇಕಾಗಿದೆ. ಬಾಕಿ 125 ಕೋಟಿ ರೂ. ಅನುದಾನವನ್ನು ಈ ಬಾರಿಯ ಬಜೆಟ್ನಲ್ಲಿ ಬಿಡುಗಡೆ ಮಾಡಬೇಕಾಗಿದೆ. ಇದರ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿರುವ ಶಶಿಕಲಾ ಜೊಲ್ಲೆ, ವಿಜಯಪುರದ ಉಸ್ತುವಾರಿ ಸಚಿವೆಯಾಗಿರುವ ಕಾರಣ ಮಹಿಳಾ ಸಬಲೀಕರಣಕ್ಕೆ ಹತ್ತು ಹಲವು ಯೋಜನೆಗಳನ್ನು ಸಿಎಂ ಮೂಲಕ ಘೋಷಿಸಬಹುದು ಎನ್ನುವ ನಿರೀಕ್ಷೆ ಇದೆ. ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯಕ್ಕೆ ಹೆಚ್ಚುವರಿ ಅನುದಾನ ದೊರಕಿಸಿಕೊಟ್ಟು ಮಹಿಳೆಯರಿಗೆ ಹೊಸ ಹೊಸ ಸಂಶೋಧನೆಗೆ ದಾರಿ ಮಾಡಿಕೊಡಬೇಕು ಎಂಬುದು ಜಿಲ್ಲೆಯ ಮಹಿಳೆಯರ ಬೇಡಿಕೆಯಾಗಿದೆ.
ತೋಟಗಾರಿಕಾ ಬೆಳೆಗಳಿಗೆ ಹೆಚ್ಚು ಪ್ರೋತ್ಸಾಹ ದೊರೆಯುತ್ತಿರುವ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ದ್ರಾಕ್ಷಿ, ದಾಳಿಂಬೆ, ನಿಂಬು, ಪೇರಲೆ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇತ್ತೀಚಿಗಷ್ಟೇ ಫುಡ್ ಪಾರ್ಕ್ ಸ್ಥಾಪನೆಗೆ ಕೃಷಿ ಸಚಿವರು ಸ್ಥಳ ವೀಕ್ಷಿಸಿದ್ದಾರೆ. ಇದನ್ನು ಆದಷ್ಟು ಬೇಗ ಸ್ಥಾಪಿಸಲು ಅಗತ್ಯ ಅನುದಾನ ಈ ಬಾರಿಯ ಬಜೆಟ್ನಲ್ಲಿ ಬಿಡುಗಡೆ ಮಾಡಬೇಕಾಗಿದೆ. ದ್ರಾಕ್ಷಿ ಸಂರಕ್ಷಿಸಲು ಹೆಚ್ಚಿನ ಶೀತಲಗೃಹ ನಿರ್ಮಾಣ, ದ್ರಾಕ್ಷಿ ರಸದಿಂದ ವೈನ್ ತಯಾರಿಸಲು ಫುಡ್ ಪಾರ್ಕ್ ಜೊತೆಗೆ ಸರ್ಕಾರಿ ವೈನ್ ಘಟಕ ಸ್ಥಾಪನೆಯ ಬೇಡಿಕೆ ಇದೆ. ಸಿಎಂ ಯಡಿಯೂರಪ್ಪ ಬರದ ಜಿಲ್ಲೆಗೆ ಭರಪೂರ ಯೋಜನೆಗಳ ಕೊಡುಗೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.