ವಿಜಯಪುರ:ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ನೆಹರೂ ಮಾರುಕಟ್ಟೆ ಬೀದಿ ವ್ಯಾಪಾರಿಗಳ ಮಳಿಗೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತೆರವುಗೊಳಿಸಲಾಗಿದೆ ಎಂದು ಬಿಜೆಪಿ ನಗರ ಘಟಕದ ಮಾಜಿ ಅಧ್ಯಕ್ಷ ಶಿವರುದ್ರ ಬಾಗಲಕೋಟ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 60ಅಡಿ ರಸ್ತೆಯಲ್ಲಿ ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡಿದ್ದರ ಕುರಿತು ಮಹಾನಗರ ಪಾಲಿಕೆಯು ವ್ಯಾಪಾರಿಗಳಿಗೆ ಸೂಚಿಸಿ ಖಾಲಿ ಮಾಡುವಂತೆ ತಿಳಿಸಲಾಗಿತ್ತು. ಅವರು ಖಾಲಿ ಮಾಡದ ಕಾರಣ ಪಾಲಿಕೆ ನೀಡಿದ ಒಪ್ಪಿಗೆ ಮೇರೆಗೆ ಮಳಿಗೆಗಳನ್ನು ತೆರವು ಮಾಡಲಾಗಿದೆ ಎಂದರು.
ಬಿಜೆಪಿ ನಗರ ಘಟಕದ ಮಾಜಿ ಅಧ್ಯಕ್ಷ ಶಿವರುದ್ರ ಬಾಗಲಕೋಟ್ ಅಲ್ಲಿ 50 ಮಂದಿ ಮಾತ್ರ ವ್ಯಾಪಾರ ಮಾಡುತ್ತಿದ್ದರು. ಆದರೆ, 350ಕ್ಕೂ ಅಧಿಕ ಜನರನ್ನ ತೆರವುಗೊಳಿಸಲಾಗಿದೆ ಎಂದು ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮಳಿಗೆ ತೆರವುಗೊಳಿಸಿದ್ದಕ್ಕೆ ಕೆಲವರು ರಾಜಕೀಯ ಬೆರೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೀದಿ ವ್ಯಾಪಾರಿಗಳ ದಟ್ಟಣೆಯಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಹೇಳಿದರು.
ನಾಳೆ ಸ್ವಯಂ ಪ್ರೇರಿತವಾಗಿ ವಿಜಯಪುರ ನಗರದಲ್ಲಿ ಬಂದ್ಗೆ ಕರೆ ನೀಡಲಾಗಿದೆ. ಬಂದ್ಗೆ ಕರೆ ನೀಡಿದವರ್ಯಾರು ಮುಂದೆ ಬರುತ್ತಿಲ್ಲ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಛಟ್ಟಿ ಅಮವಾಸ್ಯೆ ಇದೆ. ಗುಡ್ಡಾಪುರ ಯಾತ್ರೆಗೆ ಪಾದಯಾತ್ರೆ ಮೂಲಕ ಜನರು ತೆರಳಲಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಯಾರಾದರು ಗೂಂಡಾ ವರ್ತನೆ ತೋರಿದರೆ ಅಂತಹವರ ವಿರುದ್ಧ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.