ವಿಜಯಪುರ: ಕಾರಿನ ಟೈಯರ್ ಬ್ಲಾಸ್ಟ್ ಆದ ಪರಿಣಾಮ ಕಾರು ಪಲ್ಟಿಯಾಗಿ ನಾಲ್ವರಿಗೆ ಗಂಭೀರ ಗಾಯವಾದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ್ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಕಾರಿನಲ್ಲಿದ್ದ ನಿಂಗಪ್ಪ ಕುಡಕಿ (75) ಪಾರ್ವತಿ ಕುಡಕಿ (60), ಸಿದ್ಧಾರೂಢ ಕುಡುಕಿ (20) ಅಯ್ಯಪ್ಪ ಕುಡಕಿ (36) ಎಂಬುವವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಮನೆಗಳ್ಳತನ :ವಿಜಯಪುರಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಚಿಕ್ಕ ಸಿಂದಗಿ ಬೈಪಾಸ್ ಬಳಿ ಬಂಧನವಾಗಿದೆ. ಅಣ್ಣಪ್ಪ ಜೇರಟಗಿ, ಸಿದ್ರಾಮ ಪಾಟೀಲ ಬಂಧಿತ ಆರೋಪಿಗಳಾಗಿದ್ದಾರೆ. ಸಿಂದಗಿಯ ಸುತ್ತಮುತ್ತಲಿನ ಕಡೆಗೆ ಮನೆಗಳ್ಳತನ ಮಾಡುತ್ತಿದ್ದ ಖದೀಮರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ 5. 51 ಲಕ್ಷ ಮೌಲ್ಯದ 141.379 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಗುಟ್ಕಾ ಚೀಲದಲ್ಲಿ ಸಾಗಿಸುತ್ತಿದ್ದ 10 ಲಕ್ಷ ನಗದು ಪೊಲೀಸ್ ವಶ:ದಾಖಲೆ ಇಲ್ಲದೆ ಬಸ್ಸಿನಲ್ಲಿ ಸಾಗಿಸುತ್ತಿದ್ದ 10 ಲಕ್ಷ ರೂ ಹಣವನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಹೊರವಲಯದಲ್ಲಿರುವ ಕೃಷ್ಣಾ ನದಿಯ ನೀಲಮ್ಮನ ಸೇತುವೆ ಹತ್ತಿರದ ಚೆಕ್ ಪೋಸ್ಟ್ನಲ್ಲಿ (ಮಾರ್ಚ್ 24-2023) ರಂದು ಪೊಲೀಸರು ವಶಪಡಿಸಿಕೊಂಡಿದ್ದರು.