ವಿಜಯಪುರ:ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಬಿ.ವೈ.ವಿಜಯೇಂದ್ರ ಅವರಿಗೆ ವಿಜಯಪುರದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ, ಸಂಸದ ರಮೇಶ ಜಿಗಜಿಣಗಿ ಹಾಗು ಅರುಣ ಶಹಾಪುರ ಖುದ್ದಾಗಿ ಆಗಮಿಸಿ ವಿಜಯೇಂದ್ರರನ್ನು ಸ್ವಾಗತಿಸಿದರು.
ನಗರದ ಹೊರವಲಯಕ್ಕೆ ಆಗಮಿಸಿದ್ದ ರಾಜ್ಯಾಧ್ಯಕ್ಷರು, ವೀರ ಸಾವರ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಪಕ್ಷದ ಜಿಲ್ಲಾ ಕಚೇರಿಗೆ ಆಗಮಿಸಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡುತ್ತಾ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು.
"ಕಾಂಗ್ರೆಸ್ ಸರ್ಕಾರ ಬಂದು ಏಳು ತಿಂಗಳು ಕಳೆದಿದೆ. ಅವರು ನೀಡಿದ ಭರವಸೆಗಳು ಜನರಲ್ಲಿ ವಿಶ್ವಾಸ ಮೂಡಿಸಿದ್ದರಿಂದ ಬಹುಮತ ಬಂದಿದೆ. ಆದರೆ ಇಂದು ಮತದಾರರು ಶಾಪ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಆರು ತಿಂಗಳಲ್ಲೇ ಜನಪ್ರಿಯತೆ ಕಳೆದುಕೊಂಡಿದೆ" ಎಂದು ಟೀಕಿಸಿದರು.
"ರಾಜ್ಯದಲ್ಲಿ ಬರಗಾಲ ಇದೆ. ರೈತರಿಗೆ, ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು. ಆರ್ಥಿಕ ಶಕ್ತಿ ನೀಡಬೇಕು ಎಂದು ನಾವು ಸದನದಲ್ಲಿ ಒತ್ತಾಯಿಸಿದ್ದೇವೆ. ಆದರೆ ಸರ್ಕಾರ ಕಣ್ಣಿದ್ದೂ ಕುರುಡನಂತೆ, ಕಿವಿ ಇದ್ದೂ ಕಿವುಡನಂತೆ ವರ್ತಿಸುತ್ತಿದೆ. ಬರದ ವಿಚಾರದಲ್ಲಿ ಪ್ರಧಾನಿ ಭೇಟಿಗೆ ಸಿಎಂ ಹಾಗೂ ಇತರರು ಐಷಾರಾಮಿ ವಿಮಾನದಲ್ಲಿ ಹೋಗಿ ಬಂದಿದ್ದಾರೆ" ಎಂದು ಕುಟುಕಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸ ಮಾಡಿ, ಬರಗಾಲ ಕುರಿತು ಯಾವುದೇ ಸಭೆ ಮಾಡುತ್ತಿಲ್ಲ. ಕಂದಾಯ ಸಚಿವರು ಎಸಿ ರೂಂನಲ್ಲಿ ಕುಳಿತು ಸಭೆ ಮಾಡುತ್ತಿದ್ದಾರೆ ಎಂದರು. ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ. ಹಣಕಾಸು ಹೊಂದಿಸಲು 14 ಬಾರಿ ಬಜೆಟ್ ಮಂಡಸಿರುವ ಸಿಎಂ ವಿಲವಿಲ ಒದ್ದಾಡುತ್ತಿದಾರೆ. ಇವರಿಗೆ ಚುನಾವಣೆ ವೇಳೆ ಕೊಟ್ಟ ಗ್ಯಾರೆಂಟಿಗಳನ್ನು ನಿಭಾಯಿಸಲು ಆಗುತ್ತಿಲ್ಲ ಎಂದು ಹೇಳಿದರು.