ವಿಜಯಪುರ :ಮಣ್ಣು ರೈತರ ಬಾಳಿನ ಕಣ್ಣು. ಇದನ್ನು ರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಈ ಉದ್ದೇಶದಿಂದ ಆಂಧ್ರ ಪ್ರದೇಶದ ಯುವಕನೊಬ್ಬ ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಯಾತ್ರೆ ಕೈಗೊಂಡಿದ್ದಾನೆ.
ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಗೆ ಪಾದಯಾತ್ರೆ: ಮೂಲತಃ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಪೈಡೇಟಿ ಗ್ರಾಮದ 27ವರ್ಷದ ಯುವಕ ಸಿಕೊಂದು ಪವನಕುಮಾರ ಈ ಸಾಹಸಕ್ಕೆ ಕೈ ಹಾಕಿದ್ದಾನೆ. ಈತ ಮೂಲತಃ ಕೃಷಿ ಕುಟುಂಬದಿಂದ ಬಂದಿದ್ದು, ಇತ ಏರಲೈನ್ಸ್ ಟೂರಿಸಂ ಮತ್ತು ಹಾಸ್ಪಿಟಾಲಿಟಿ (ಎಟಿಎಚ್) ಕೋರ್ಸ್ ನಲ್ಲಿ ಬಿಎಸ್ ಸಿ ಪದವೀಧರನಾಗಿದ್ದಾನೆ. ಕೆಲ ವರ್ಷಗಳ ಕಾಲ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿದ್ದಾನೆ. ನಂತರ ಪೋಷಕರ ಒತ್ತಾಯದ ಮೇರೆಗೆ ಸ್ವಗ್ರಾಮಕ್ಕೆ ಬಂದು ತಂದೆ ಜತೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ, ಉತ್ತಮ ಇಳುವರಿಗೆ ಮಣ್ಣಿಗೆ ಎಷ್ಟು ಮಹತ್ವ ಇದೆ. ಫಲವತ್ತಾದ ಮಣ್ಣಿನಿಂದ ಉತ್ತಮ ಇಳುವರಿ ಪಡೆಯಬಹುದು ಎಂಬುದನ್ನು ಕಂಡು ಕೊಂಡಿದ್ದಾರೆ.
ಮಣ್ಣು ಉಳಿಸಿ: ಇನ್ನು ಮಣ್ಣಿನ ಮಹತ್ವವನ್ನು ದೇಶದ ಜನರಿಗೆ ತಿಳಿಸುವ ಉದ್ದೇಶದಿಂದ ಪಾದಯಾತ್ರೆ ಮಾಡಲು ನಿರ್ಧರಿಸಿದ್ದಾರೆ. ಕಳೆದ 2022 ಆಗಸ್ಟ್ 17ರಂದು ಜಮ್ಮುವಿನಿಂದ ಪವನಕುಮಾರ ಪಾದಯಾತ್ರೆ ಆರಂಭಿಸಿದ್ದಾರೆ. ಈ ವರೆಗೂ ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳನ್ನು ಸುತ್ತಿ 149 ದಿನಗಳ ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ. ಸದ್ಯ ಮಹಾರಾಷ್ಟ್ರದಿಂದ ಧೂಳಖೇಡ ಮೂಲಕ ಕರ್ನಾಟಕ ಪ್ರವೇಶಿಸಿದ್ದು, ನಿಡಗುಂದಿಗೆ ತಲುಪಿದ್ದರು. ಇದಕ್ಕೂ ಮೊದಲು ಗೊಳಸಂಗಿಯ ವಿಠ್ಠಲ - ರುಕ್ಮಿಣಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು.
ಇಲ್ಲಿ ಗ್ರಾಮಸ್ಥರ ಜತೆ ಸಭೆ ನಡೆಸಿ ಮಣ್ಣಿನ ಮಹತ್ವದ ಕುರಿತು ಅಪರೂಪದ ಮಾಹಿತಿ ಹಂಚಿಕೊಂಡರು. ಬುಧವಾರ ಮತ್ತೆ ಪಾದಯಾತ್ರೆ ಆರಂಭಿಸಿ ನಿಡಗುಂದಿ ಮೂಲಕ ಪಾದಯಾತ್ರೆ ಮತ್ತೆ ಮುಂದುವರೆಸಿದ್ದಾರೆ. ಯುವಕನ ಪಾದಯಾತ್ರೆ ಕನ್ಯಾಕುಮಾರಿ ತಲುಪಲು ಇನ್ನೂ ಕನಿಷ್ಠ 50 ದಿನಗಳಾದರೂ ಬೇಕಾಗುತ್ತದೆ.