ವಿಜಯಪುರ: ಉತ್ತರ ಕರ್ನಾಟಕ ಪ್ರವಾಹದ ಹೊಡೆತಕ್ಕೆ ಸಿಕ್ಕಿ ನಲುಗುತ್ತಿದೆ. ಮನೆ ಮತ್ತು ಅಗತ್ಯ ವಸ್ತುಗಳನ್ನು ಕಳೆದುಕೊಂಡು ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಅಂತಹ ನಿರಾಶ್ರಿತರಲ್ಲಿ ಹಸುಗೂಸುಗಳು ಕೂಡ ಸೇರಿರುವುದರಿಂದ, ಆ ಮುದ್ದು ಕಂದಮ್ಮಗಳಿಗೆ ಬೇಕಿರುವ ಅಗತ್ಯ ಸಾಮಗ್ರಿಗಳನ್ನು ನೀಡುವ ಮೂಲಕ ಎಂಎಲ್ಸಿ ಅವರ ಪುತ್ರಿ ಇತರರಿಗೂ ಮಾದರಿಯಾಗಿದ್ದಾರೆ.
ನೆರೆ ಸಂತ್ರಸ್ತ ಕಂದಮ್ಮಗಳಿಗಾಗಿ ಮಿಡಿದ ಮನ... ಸ್ಪರ್ಧೆಯಲ್ಲಿ ಗೆದ್ದ ಹಣದಿಂದ ತೊಟ್ಟಿಲು ಕೊಡಿಸಿದ ಬಾಲಕಿ
ವಿಧಾನ ಪರಿಷತ್ ಸದಸ್ಯ ಸುನೀಲ ಗೌಡ ಬಿ. ಪಾಟೀಲ್ ಅವರ ಪುತ್ರಿ ಸಾನ್ವಿ ಎಸ್. ಪಾಟೀಲ್, ನೆರೆ ಸಂತ್ರಸ್ತ ಕುಟುಂಬಗಳ ಹಸುಗೂಸುಗಳಿಗೆ ತೊಟ್ಟಿಲುಗಳನ್ನು ಕೊಡಿಸಿದ್ದಾಳೆ.
ವಿಧಾನ ಪರಿಷತ್ ಸದಸ್ಯ ಸುನೀಲ ಗೌಡ ಬಿ. ಪಾಟೀಲ್ ಅವರ ಪುತ್ರಿ ಸಾನ್ವಿ ಎಸ್.ಪಾಟೀಲ್ ಜನಮೆಚ್ಚುವ ಕಾರ್ಯ ಮಾಡಿರುವ ಬಾಲಕಿ. ಸಾನ್ವಿ ಬಿ.ಎಂ. ಪಾಟೀಲ್ ಪಬ್ಲಿಕ್ ಸ್ಕೂಲ್ನ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಭಾನುವಾರ ಬಾಗಲಕೋಟೆಯಲ್ಲಿ ನಡೆದಿದ್ದ ಬ್ಯಾಡ್ಮಿಂಟನ್‍ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಳು. ಅದರಲ್ಲಿ ತಮಗೆ ಬಂದ ಬಹುಮಾನದ ಹಣದಲ್ಲಿ ನೆರೆ ಸಂತ್ರಸ್ತ ಕುಟುಂಬಗಳ ಹಸುಗೂಸುಗಳ ರಕ್ಷಣೆಗಾಗಿ ತೊಟ್ಟಿಲುಗಳನ್ನು ಕೊಡಿಸಿದ್ದಾಳೆ.
ಮುದ್ದೇಬಿಹಾಳ ಸಂತ್ರಸ್ತರ ಕೇಂದ್ರಗಳಲ್ಲಿ ತಾಯಂದಿರು ತಮ್ಮ ಕಂದಮ್ಮಗಳಿಗೆ ಈ ತೊಟ್ಟಿಲುಗಳನ್ನು ಬಳಸುತ್ತಿದ್ದಾರಂತೆ. ಸಾನ್ವಿಯ ಈ ಉದಾರತೆ ಮತ್ತು ಮಾನವೀಯ ಗುಣ ಉಳಿದ ವಿದ್ಯಾರ್ಥಿಗಳಿಗೂ ಮಾದರಿಯಾಗಿದೆ.