ಕಾರವಾರ: ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳು ರಾಜ್ಯದ ಮುಖ್ಯಮಂತ್ರಿಯಾದರು ನನ್ನ ವಾಹನವನ್ನೇ ಪದೆ ಪದೇ ತಡೆದು ತಪಾಸಣೆ ನಡೆಸುತ್ತಿದ್ದಾರೆ. ಆದರೆ ದುಡ್ಡು ಹೋಗುವ ಕಡೆ ಹೋಗುತ್ತಿರುವುದು ಅವರಿಗೆ ಕಾಣಿಸುತ್ತಿಲ್ಲ ಎಂದು ಸಿಎಂ ಹೆಚ್. ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಂದಾಪುರದಿಂದ ಕಾರವಾರk್ಕೆ ಬರುವಾಗ ಒಟ್ಟು 13 ಬಾರಿ ನನ್ನ ಮತ್ತು ನನ್ನ ಬೆಂಗಾವಲು ವಾಹನವನ್ನು ತಡೆದು ತಪಾಸಣೆ ನಡೆಸಿದ್ದಾರೆ. ಇಂದು ಗೋಕರ್ಣದಿಂದ ತಿಂಡಿ ಮುಗಿಸಿ ಕಾರವಾರಕ್ಕೆ ಹೊರಡುವಾಗಲೂ ಮತ್ತೆ ಎರಡು ಬಾರಿ ತಪಾಸಣೆ ನಡೆಸಿದ್ದಾರೆ. ನಾನು ತಪಾಸಣೆ ನಡೆಸುವುದನ್ನು ತಪ್ಪು ಎನ್ನುತ್ತಿಲ್ಲ. ಆದರೆ ನಮ್ಮ ತಪಾಸಣೆ ಮಾಡಿ ಬೇರೆಡೆ ಹಣ ಸಾಗಣೆ ಆಗುತ್ತಿದ್ದರೂ ಅದನ್ನ ತಡೆಯದೆ ನಾಟಕ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪದೆ ಪದೆ ವಾಹನ ತಪಾಸಣೆಗೆ ಸಿಎಂ ಕಿಡಿ ಮಂಡ್ಯದಲ್ಲಿ ಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಿಖಿಲ್ ಕೆಆರ್ಎಸ್ ಹೊಟೇಲ್ನಲ್ಲಿ ವಾಸ್ತವ್ಯ ಹೂಡಿತ್ತಿದ್ದಾರೆ. ಆದರೆ ಅವರು ಊಟಕ್ಕೆ ತೆರಳಿದಾಗ ಐಟಿ ಮತ್ತು ಸಿಬಿಐ ಅಧಿಕಾರಿಗಳು ಅಲ್ಲಿಗೂ ತೆರಳಿ ತಪಾಸಣೆ ನಡೆಸಿದ್ದಾರೆ. ಇಷ್ಟು ಕೀಳು ಮಟ್ಟದ ರಾಜಕಾರಣ ಸರಿಯಲ್ಲ. ಆದರೆ ಎದುರಾಳಿ ಅಭ್ಯರ್ಥಿಗಳು ದುಡ್ಡು ಹಂಚುವ ಕಡೆ ಹಂಚುತ್ತಿದ್ದಾರೆ. ನೂರಾರು ವಾಹನಗಳು ತೆರಳುವಾಗ ಹಣ ಸಾಗಿಸುತ್ತಿದ್ದಾರೆ. ಎಲ್ಲಿಂದಲೋ ಜನರನ್ನು ಕರೆತಂದು ಪ್ರಚಾರ ಮಾಡಿಸುತ್ತಿದ್ದಾರೆ. ಆದರೆ ಇದರ ಬಗ್ಗೆ ಗಮನ ನೀಡದೆ ಕೇವಲ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗುರಿಯಾಗಿಸಿದ್ದಾರೆ ಎಂದು ಸಿಎಂ ಕೆಂಡಾಮಂಡಲವಾದರು.
ಚುನಾವಣೆ ಘೋಷಣೆಯಾದ ಮೇಲೆ ನಿರಂತರವಾಗಿ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಇದರಿಂದ ಏನು ಪ್ರಯೋಜನ. ಮತ್ತೆ ನೇಮಕವಾಗುವ ಅಧಿಕಾರಿಗಳು ನಮ್ಮ ಕೈ ಕೆಳಗಿನ ಅಧಿಕಾರಿಗಳೆ. ಆದ್ದರಿಂದ ವರ್ಗಾವಣೆ ಮಾಡಿ ತೊಂದರೆ ಕೊಟ್ಟರೆ ಏನು ಪ್ರಯೋಜನವಾಗಿದೆ ಎಂದು ಪ್ರಶ್ನಿಸಿದ್ದಾರೆ.