ಸುವಿಧಾ ಮತ್ತು ಸಿ-ವಿಜಿಲ್ ತಂತ್ರಾಂಶದ ಮಾಹಿತಿ ನೀಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಾರವಾರ: ಚುನಾವಣೆ ವೇಳೆ ನಡೆಯುವ ಅಕ್ರಮಗಳ ಮಾಹಿತಿ ಪಡೆದು ಅದನ್ನು ತಡೆಯುವ ನಿಟ್ಟಿನಲ್ಲಿ ಮತ್ತು ಎಲೆಕ್ಷನ್ ವೇಳೆ ಕಾರ್ಯಕ್ರಮ ಹಾಗೂ ಇತರ ಅನುಮತಿಗಳಿಗೆ ಅನಗತ್ಯ ಓಡಾಟ ತಪ್ಪಿಸುವ ಸಂಬಂಧ ಚುನಾವಣಾ ಆಯೋಗ ಸುವಿಧಾ ಮತ್ತು ಸಿ-ವಿಜಿಲ್ ತಂತ್ರಂಶವನ್ನು ಅಭಿವೃದ್ಧಿಪಡಿಸಿದ್ದು ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ಸದುಪಯೋಗ ಪಡೆದು ಕೊಳ್ಳಬಹುದಾಗಿದೆ.
ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ವಿವಿಧ ಪಕ್ಷಗಳು ಪ್ರಚಾರ ಸಭೆಗಳನ್ನು ನಡೆಸಿ ಮತದಾರರ ಓಲೈಕೆಯಲ್ಲಿ ತೊಡಗಿವೆ. ಅಲ್ಲದೇ, ಪ್ರಚಾರ, ಮೆರವಣಿಗೆ, ಸಭೆ ಸಮಾರಂಭಗಳ ಆಯೋಜನೆಗೆ ಪ್ಲಾನ್ ರೂಪಿಸುತ್ತಿದ್ದು, ಈ ಎಲ್ಲ ಕಾರ್ಯಗಳಿಗೂ ರಾಜಕೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸುವವರು ಚುನಾವಣಾ ಆಯೋಗದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅಲ್ಲದೇ, ಜಾತ್ರೆ, ಸಾರ್ವಜನಿಕವಾಗಿ ನಡೆಯುವ ಇತರ ಸಮಾರಂಭಗಳಿಗೂ ಈ ಅನುಮತಿ ಕಡ್ಡಾಯವಾಗಿದೆ.
ಚುನಾವಣಾ ಪ್ರಚಾರಕ್ಕೆ ಅನುಮತಿ: ಚುನಾವಣಾ ಪ್ರಚಾರಕ್ಕೆ ಅನುಮತಿಯನ್ನು ಪಡೆಯಲು ಸಾರ್ವಜನಿಕರಿಗೆ ಹಾಗೂ ರಾಜಕೀಯ ಪಕ್ಷದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗ ಸುವಿಧಾ ತಂತ್ರಾಂಶದ ಆನ್‌ಲೈನ್ ಅಪ್ಲಿಕೇಶನ್ ನೀಡಿದೆ. ಇದನ್ನು ಬಳಸಿಕೊಂಡು ಚುನಾವಣಾ ಪ್ರಚಾರಕ್ಕೆ ಅಗತ್ಯವಿರುವ ಅನುಮತಿಗಳನ್ನು ಪಡೆದುಕೊಳ್ಳಬಹುದಾಗಿದೆ.
48 ಗಂಟೆ ಮೊದಲು ಅರ್ಜಿ ಸಲ್ಲಿಸಬೇಕು: ಸುವಿಧಾ ತಂತ್ರಾಂಶದಲ್ಲಿ ರಾಜಕೀಯ ಪಕ್ಷ, ಪಕ್ಷದ ಅಭ್ಯರ್ಥಿ, ಏಜೆಂಟ್, ಕಾರ್ಯಕರ್ತ ಅಥವಾ ಇತರರು ತಮಗೆ ಬೇಕಿರುವ ಚುನಾವಣಾ ಪ್ರಚಾರ ಕಾರ್ಯಗಳಿಗೆ ಅನುಮತಿ ಪಡೆಯಲು ಆನ್‌ಲೈನ್ ಮೂಲಕ ಅಗತ್ಯ 48 ಗಂಟೆ ಮೊದಲು ಈ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬೇಕು. ಸಲ್ಲಿಕೆಯಾದ ಅರ್ಜಿಯನ್ನು ಸಂಬಂಧಿಸಿದ ಇಲಾಖೆಗಳು ಪರಿಶೀಲಿಸಿ, ಒಪ್ಪಿಗೆ ನೀಡಿದ ನಂತರ ಆಯಾ ಚುನಾವಣಾಧಿಕಾರಿಗಳು ಅನುಮತಿ ಪತ್ರ ನೀಡಲಿದ್ದಾರೆ.
ಚುನಾವಣಾಧಿಕಾರಿಗಳಿಂದ ಅನುಮತಿ:ಇನ್ನು ಚುನಾವಣಾ ಸಭೆ, ಜಾಥಾ, ಪ್ರಚಾರ ಸಾಮಗ್ರಿ ಅಳವಡಿಕೆ, ವೇದಿಕೆ, ಮೈಕ್, ವಾಹನ, ಸಮಾರಂಭ ಮುಂತಾದ ರೀತಿಯ ಕಾರ್ಯಗಳಿಗೂ ಸುವಿಧಾದಲ್ಲಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಅನುಮತಿ ಪತ್ರ ಪಡೆಯಬಹುದಾಗಿದೆ. ವಿವಿಧ ರೀತಿಯ ಚುನಾವಣಾ ಪ್ರಚಾರ ಕಾರ್ಯ ಮತ್ತು ಅವುಗಳಿಗೆ ಸಂಬಂಧಿಸಿದಂತೆ ಮತಕ್ಷೇತ್ರ ವ್ಯಾಪ್ತಿಗೆ ಆಯಾ ಚುನಾವಣಾ ಅಧಿಕಾರಿಗಳು, ಜಿಲ್ಲಾ ವ್ಯಾಪ್ತಿಗೆ ಜಿಲ್ಲಾ ಚುನಾವಣಾ ಅಧಿಕಾರಿ ಮಾಹಿತಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ ನೀಡಿದರು.
ಇದನ್ನೂ ಓದಿ :ಚುನಾವಣೆ ಪ್ರಚಾರ ವಾಹನಕ್ಕೆ ಸ್ಮಶಾನದಲ್ಲಿ ಪೂಜೆ ನೆರವೇರಿಸಲಾಗುವುದು: ಸತೀಶ್ ಜಾರಕಿಹೊಳಿ
ನೀತಿ ಸಂಹಿತೆ ಉಲ್ಲಂಘನೆ ದೂರು ಸಲ್ಲಿಕೆಗೆ ಸಿ ವಿಜಿಲ್ : ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗ ಇದೀಗ ಜನಸಮಾನ್ಯರು ತಮಗಿರುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಗುಪ್ತವಾಗಿ ಹಾಗೂ ಸುಲಭವಾಗಿ ಹಂಚಿಕೊಳ್ಳಲು ಅನುಕೂಲವಾಗುವಂತೆ ಸಿ-ವಿಜಿಲ್ ತಂತ್ರಾಂಶ ಜಾರಿಗೆ ತಂದಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಬ್ಯಾನರ್, ಪೋಸ್ಟರ್ಗಳನ್ನು ತೆರವುಗೊಳಿಸದೇ ಇರುವುದು, ಹಣ ಹಂಚಿಕೆ, ಮದ್ಯ ಹಂಚಿಕೆ, ಸೀರೆ ಅಥವಾ ಉಚಿತ ಉಡುಗೊರೆಗಳನ್ನು ನೀಡುವುದು, ಅನುಮತಿ ಪಡೆಯದೇ ಸಭೆ ಸಮಾರಂಭಗಳನ್ನು ಆಯೋಜಿಸಿರುವ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಸಿ-ವಿಜಿಲ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಛಾಯಾಚಿತ್ರ, ವಿಡಿಯೋ ಅಥವಾ ಧ್ವನಿಮುದ್ರಿತ ಕ್ಲಿಪಿಂಗ್ಸ್ಗಳನ್ನು ಕಳುಹಿಸಬಹುದಾಗಿದೆ. ದೂರನ್ನು ದಾಖಲಿಸಬಹುದಾಗಿರುತ್ತದೆ. ಬಳಿಕ ಸಂಬಂಧಪಟ್ಟ ಚುನಾವಣಾಧಿಕಾರಿಗಳು ತುರ್ತಾಗಿ ಸ್ಥಳಕ್ಕೆ ಧಾವಿಸಿ ಸದರಿ ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.