ಉತ್ತರ ಕನ್ನಡ (ಭಟ್ಕಳ): ದೇಶದಾದ್ಯಂತ ಲಾಕ್ಡೌನ್ ಆದೇಶ ಜಾರಿಯಾಗಿರುವುದರಿಂದ ಬಡವರು, ಕೂಲಿ ಕಾರ್ಮಿಕರು ತೀವ್ರ ಸಮಸ್ಯೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆ ಇಂತವರನ್ನು ಗುರುತಿಸಿ ಅವರಿರುವ ಸ್ಥಳಕ್ಕೆ ಆಹಾರ ಪದಾರ್ಥಗಳನ್ನು ಭಟ್ಕಳದ ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ನೀಡುತ್ತಿದೆ. ಕ್ಲಬ್‍ನ ಸುಮಾರು 15 ಜನರ ತಂಡ ಅಡುಗೆ ತಯಾರಿಸಿ ಅಗತ್ಯವಿರುವವರನ್ನು ಹುಡುಕಿ ಅವರಿಗೆ ನೀಡುವ ಕಾರ್ಯ ಮಾಡುತ್ತಿದೆ.
ಹಸಿದವರ ಹೊಟ್ಟೆ ತುಂಬಿಸಲು ಮನೆ ಬಾಗಿಲಿಗೆ ಬರುತ್ತಿದೆ 15 ಜನರ ವಾರಿಯರ್ಸ್ ತಂಡ ಮುಂಜಾನೆ 5.30ರಿಂದ ಇಲ್ಲಿನ ಸೋಡಿಗದ್ದೆಯಲ್ಲಿನ ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್‍ನ ಸಂಸ್ಥಾಪಕ ವಾಸು ನಾಯ್ಕ ಅವರ ನಿವಾಸದಲ್ಲಿ ಕ್ಲಬ್‍ನ 15 ಮಂದಿ ಯುವಕರು ಬಂದು ಪತ್ರಿನಿತ್ಯ ಅಡುಗೆ ತಯಾರಿಸಿ ಅಗತ್ಯವಿರುವವರಿಗೆ ಹಂಚುತ್ತಿದ್ದಾರೆ.
ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿನನಿತ್ಯ 350ರಿಂದ ಆರಂಭಗೊಂಡು 500 ಊಟ ತಯಾರಿಯವರೆಗೆ ತಲುಪಿದ್ದು, ಒಟ್ಟು 15 ಮಂದಿ ಸದಸ್ಯರಿಂದ ದಿನದ 10-12 ಗಂಟೆ ಈ ಬೃಹತ್ ಅನ್ನ ದಾಸೋಹ ಸೇವೆ ನಡೆಯುತ್ತಿದೆ.
ಈ ಬಗ್ಗೆ ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ಸಂಸ್ಥಾಪಕ ವಾಸು ನಾಯ್ಕ ಮಾತನಾಡಿ, ‘ಯಾರೇ ಆಗಲಿ ಆಹಾರ ಬೇಕಿದ್ದಲ್ಲಿ ನಾವು ನೀವಿರುವ ಸ್ಥಳಕ್ಕೆ ಬಂದು ವಿತರಿಸಲಿದ್ದೇವೆ. ಲಾಕ್ಡೌನ್ ಆರಂಭದಲ್ಲಿ ರಸ್ತೆಯಲ್ಲಿ ಹಸಿದು ಹೋಗುತ್ತಿರುವವರನ್ನು ಕಂಡು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಹಣವಿದ್ದರೂ ಜನರಿಗೆ ಅನ್ನ ಸಿಗುತ್ತಿಲ್ಲ. ಹಸಿದವರಿಗೆ ಮಾತ್ರ ಈ ಸೇವೆ ಆರಂಭಿಸಿದ್ದು, ಬಳಿಕ ಕೆಲವರು ಆಹಾರ, ಹಣದ ರೂಪದಲ್ಲಿ ಸೇವೆಗೆ ಕೈಜೋಡಿಸಿದ್ದಾರೆ ಎಂದಿದ್ದಾರೆ.