ಕರ್ನಾಟಕ

karnataka

ETV Bharat / state

ಶಿರಸಿ: ಕಲ್ಲಿ ಶಾಲೆಯ ವಿದ್ಯಾರ್ಥಿಗಳ ಪ್ರತಿಭಟನೆ ಮುಕ್ತಾಯ; ಪ್ರಭಾರಿ ಪ್ರಾಂಶುಪಾಲರ ನೇಮಕ

ಶಿರಸಿ ತಾಲೂಕಿನ ಕಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಿರಿಯ ಶಿಕ್ಷಕಿಯನ್ನು ಪ್ರಭಾರಿ ಪ್ರಾಂಶುಪಾಲರನ್ನಾಗಿ ನೇಮಕ ಮಾಡಲಾಗಿದೆ.‌

ಕಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ
ಕಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ

By ETV Bharat Karnataka Team

Published : Aug 23, 2023, 5:58 PM IST

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಅಜ್ಜಯ್ಯ ಹೇಳಿಕೆ

ಶಿರಸಿ (ಉತ್ತರ ಕನ್ನಡ) : ತಾಲೂಕಿನ ಕಲ್ಲಿ ಎಂಬಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರ ವರ್ಗಾವಣೆ ವಿರೋಧಿಸಿ ಕಳೆದ ಎರಡು ದಿನಗಳಿಂದ ವಿದ್ಯಾರ್ಥಿಗಳು, ಪಾಲಕರು ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ಶಾಲೆಯಲ್ಲಿರುವ ಹಿರಿಯ ಶಿಕ್ಷಕಿಯನ್ನು ಪ್ರಭಾರಿ ಪ್ರಾಂಶುಪಾಲರನ್ನಾಗಿ ನೇಮಕ ಮಾಡಲಾಗಿದ್ದು, ಪ್ರತಿಭಟನೆ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.

ಮಂಗಳವಾರ ಆರಂಭವಾಗಿದ್ದ ಪ್ರತಿಭಟನೆ ಬುಧವಾರವೂ ಮುಂದುವರೆದಿತ್ತು. ಹೊಸ ಪ್ರಾಂಶುಪಾಲರು ಅಧಿಕಾರ ಸ್ವೀಕಾರ ಮಾಡಿದ ಕಾರಣ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಇದರಿಂದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಕೈಗೊಂಡಿದ್ದರು. ಪಾಲಕರೂ ಸಹ ಶಾಲೆಯ ಹೊರಗಡೆ ವಿದ್ಯಾರ್ಥಿಗಳಿಗೆ ಸಹಕರಿಸಿದ್ದರು. ಹಳೆಯ ಪ್ರಾಂಶುಪಾಲ ರಾಘವೇಂದ್ರ ನಾಯ್ಕ ಅವರನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದರು. ಇದರ ಜೊತೆಗೆ ಕಿರುಕುಳದ ಆರೋಪ ಹೊತ್ತಿರುವ ಚಂದ್ರಶೇಖರ ನಾಯ್ಕ ಅವರು ಬರಬಾರದು ಎಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಶಾಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಬುಧವಾರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಅಜ್ಜಯ್ಯ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ, ಪಾಲಕರ ಅಹವಾಲು ಸ್ವೀಕಾರ ಮಾಡಿದರು. ಈ ವೇಳೆ ವಿದ್ಯಾರ್ಥಿನಿಯರು ಹೊಸ ಪ್ರಾಂಶುಪಾಲರ ಮೇಲೆ ಆರೋಪವಿದ್ದು, ಅನುಚಿತವಾಗಿ ವರ್ತಿಸುತ್ತಿದ್ದಾರೆ. ನಾವು ಹೇಗೆ ಭಯಮುಕ್ತವಾಗಿ ಕಲಿಯಬೇಕು ಎಂದು ಪ್ರಶ್ನಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಹೇಳಿಕೆ: ಅಜ್ಜಯ್ಯ ಪ್ರತಿಕ್ರಿಯಿಸಿ, "ಎಲ್ಲಾ ವಿದ್ಯಾರ್ಥಿಗಳ ಜವಾಬ್ದಾರಿ ನಮ್ಮದು. ನಿಮ್ಮ ಆರೋಪವನ್ನು ಸರ್ಕಾರಕ್ಕೆ ವರದಿ ಮಾಡಲಾಗುತ್ತದೆ. ಹಳೆ ಪ್ರಾಂಶುಪಾಲರು ಶಾಲೆಯನ್ನು ಅಭಿವೃದ್ಧಿ ಮಾಡಿದ್ದು, ಬೇರೆಡೆಗೂ ಅಭಿವೃದ್ಧಿ ಮಾಡಲು ವರ್ಗಾವಣೆ ಮಾಡಲಾಗಿದೆ. ಆರೋಪ ಹೊತ್ತಿರುವ ಚಂದ್ರಶೇಖರ ನಾಯ್ಕ ಅವರು ಕೂಡ ಸರ್ಕಾರದಿಂದ ಆರೋಪ ಮುಕ್ತವಾಗಿರುವ ದಾಖಲೆಗಳನ್ನು ಕೊಟ್ಟಿದ್ದಾರೆ. ಮತ್ತೊಂದೆಡೆ, ವಿದ್ಯಾರ್ಥಿಗಳು ಕೂಡಾ ಅಹವಾಲು ಕೊಟ್ಟಿದ್ದಾರೆ. ಇದನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುತ್ತೇನೆ. ಆರೋಪಗಳನ್ನು ಪರಿಶೀಲನೆ ನಡೆಸಿ ಸರ್ಕಾರದಿಂದ ಆದೇಶ ಬರುವವರೆಗೆ ಇಲ್ಲಿನ ಹಿರಿಯ ಶಿಕ್ಷಕಿ ರಾಜೇಶ್ವರಿ ಅವರನ್ನು ಪ್ರಭಾರಿ ಪ್ರಾಂಶುಪಾಲರಾಗಿ ನೇಮಕ ಮಾಡಲಾಗಿದೆ" ಎಂದು ತಿಳಿಸಿದರು.‌

ಬಳಿಕ ವಿದ್ಯಾರ್ಥಿಗಳ ಪೋಷಕರು ಮಾತನಾಡಿ, "ಕಲ್ಲಿ ಶಾಲೆಯು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿಗೆ ಆರೋಪಗಳಿರುವ ಪ್ರಾಂಶುಪಾಲರನ್ನು ನೇಮಕ ಮಾಡಿದಲ್ಲಿ ಪಾಲಕರು ನೆಮ್ಮದಿಯಿಂದ ಇರಲು ಹೇಗೆ ಸಾಧ್ಯ?, ಹಿಂದಿನ ಪ್ರಾಂಶುಪಾಲರನ್ನು ಈ ವರ್ಷದ ಶೈಕ್ಷಣಿಕ ಅವಧಿ ಮುಗಿಯುವವರೆಗೆ ಮುಂದುವರೆಸಿದಲ್ಲಿ ಅನುಕೂಲವಾಗುತ್ತದೆ" ಎಂದು ಹೇಳಿದರು.

ಇದನ್ನೂ ಓದಿ:ಶಿರಸಿ: ಪ್ರಾಂಶುಪಾಲರ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ABOUT THE AUTHOR

...view details