ಭಟ್ಕಳ (ಉತ್ತರ ಕನ್ನಡ):ಕೃಷಿಗೆ ಪೂರಕವಾದ ವಾತಾವರಣ ಒದಗಿಸದ ತಾಲೂಕಾಡಳಿತ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಶಿರಾಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 700 ಹೆಕ್ಟೇರ್ ಕೃಷಿ ಜಮೀನಿದೆ. ಇದಕ್ಕೆ ಕಡವಿನಕಟ್ಟೆ ಡ್ಯಾಂನಿಂದ ಕಾಲುವೆ ಮೂಲಕ ನೀರು ಹರಿಯಬಿಡಲಾಗುತ್ತದೆ. ಆದರೆ ಮಳೆಗಾಲದಲ್ಲಿ ಹರಿಯುವ ನೀರಿನ ರಭಸಕ್ಕೆ ಕಾಲುವೆಗಳೆಲ್ಲ ಹೂಳು ತುಂಬಿಕೊಂಡಿದ್ದು, ಪರಿಣಾಮ ನೀರು ರೈತರ ಕೃಷಿ ಜಮೀನುಗಳಿಗೆ ತಲುಪುತ್ತಿಲ್ಲ.
ಶಿರಾಲಿ ಗ್ರಾಮಸ್ಥರಿಂದ ಪ್ರತಿಭಟನೆ ಇಲ್ಲಿನ ಹುಲ್ಲುಕ್ಕಿ, ನೀರಕಂಟ, ಚಿತ್ರಾಪುರ್, ವೆಂಕಟಾಪುರ ಸೇರಿ ಸ್ಥಳೀಯ ರೈತರು ಹಲವಾರು ಬಾರಿ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ರೈತರ ಮನವಿಗೆ ಸ್ಪಂದಿಸಿಲ್ಲ. ಅತ್ತ ಕೃಷಿ ಜಮೀನುಗಳು ಸೊರಗಿ ಹೋಗುವುದನ್ನು ನೋಡಿದ ರೈತರು ಸ್ವತಃ ಹೂಳೆತ್ತಲು ಆರಂಭಿಸಿದ್ದಾರೆ. ಕಳೆದೊಂದು ವಾರದಿಂದ ಅಕ್ಕಪಕ್ಕದ ರೈತರು ಕಾಲುವೆಯಲ್ಲಿ ನೀರು ಹರಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ ಪ್ರಯೋಜನವಾಗದೆ ಈಗ ಪ್ರತಿಭಟನೆಗೆ ಮುಂದಾಗಿದ್ದಾರೆ.
ಶಿರಾಲಿ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆಗಿಳಿದ ರೈತರುಸ, "ಕೃಷಿ ಭೂಮಿಯಲ್ಲಿ ಶೇಂಗಾ ಬೆಳೆ ಸೇರಿದಂತೆ ಭತ್ತ ನಾಟಿ ಮಾಡಲಾಗಿದೆ. ಆದರೆ ನೀರು ಪೊರೈಕೆಯಾಗದೆ ಬೆಳೆಗಳು ಸೊರಗುತ್ತಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಟ್ಕಳದ ಕಡವಿನಕಟ್ಟೆಯ ಡ್ಯಾಂನಿಂದ ಶಿರಾಲಿಯವರೆಗೆ ಇರುವ ನಾಲೆಯ ಹೂಳನ್ನು ತೆಗೆಯಬೇಕು ಎಂದು ಆಗ್ರಹಿಸಿದ್ದಾರೆ. ಮುಂದಿನ ಶನಿವಾರದೊಳಗೆ ನಮ್ಮ ಕೃಷಿ ಭೂಮಿಗೆ ನೀರು ಹರಿಸದಿದ್ದರೆ ಶಿರಾಲಿಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.