ಕಾರವಾರ: ಸೆಲ್ಫಿ ತೆಗೆಯಲು ಹೋಗಿ ಸಮುದ್ರಕ್ಕೆ ಬಿದ್ದು ನೀರಿನ ಸೆಳವಿಗೆ ಸಿಲುಕಿದ್ದ ಪ್ರವಾಸಿಗನೋರ್ವನನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಮುರುಡೇಶ್ವರದ ಕಡಲತೀರದಲ್ಲಿ ಇಂದು ನಡೆದಿದೆ.
ಸೆಲ್ಫಿ ಕ್ರೇಜ್..! ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದವನ ರಕ್ಷಣೆ - life
ಸಮುದ್ರದ ಅಪಾಯಕಾರಿ ಸ್ಥಳದಲ್ಲಿ ನಿಂತು ಯುವಕನೋರ್ವ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದ ಘಟನೆ ಮುರುಡೇಶ್ವರದ ಕಡಲತೀರದಲ್ಲಿ ನಡೆದಿದೆ. ಅದೃಷ್ಟವಶಾತ್ ಲೈಫ್ ಗಾರ್ಡ್ ಹಾಗೂ ಸ್ಥಳೀಯರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ.
ಮೈಸೂರು ಮೂಲದ ಅನೀಲಕುಮಾರ್ (35) ರಕ್ಷಣೆಗೊಳಗಾದ ವ್ಯಕ್ತಿ. ಪ್ರವಾಸಕ್ಕೆ ಮುರುಡೇಶ್ವರಕ್ಕೆ ಬಂದಿದ್ದ ಈತ ಕಡಲತೀರದ ಬಳಿ ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದ ಎನ್ನಲಾಗಿದೆ. ಆದರೆ, ಈ ವೇಳೆ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದು, ನೀರಿನ ಸೆಳವಿಗೆ ಸಿಲುಕಿಕೊಂಡಿದ್ದ. ತಕ್ಷಣ ಸ್ಥಳದಲ್ಲಿದ್ದವರು ಅಲ್ಲಿಯೇ ಇದ್ದ ಲೈಫ್ ಗಾರ್ಡ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅದರಂತೆ ನೆರವಿಗೆ ಧಾವಿಸಿದ ಇವರು ಸ್ಥಳೀಯರ ಸಹಕಾರದಲ್ಲಿ ಅನೀಲಕುಮಾರ್ ಅವರನ್ನು ರಕ್ಷಣೆ ಮಾಡಿದ್ದಾರೆ. ಇನ್ನು ನೀರು ಕುಡಿದು ಅಸ್ವಸ್ಥನಾಗಿದ್ದರಿಂದ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿಲಾಯಿತು.