ಕಾರವಾರ: ಕೊರೊನಾ ವೈರಸ್ ದಾಳಿಗೆ ದೇಶವೇ ಕಂಗಾಲಾಗಿದೆ. ಕಳೆದ ನಾಲ್ಕೈದು ತಿಂಗಳಿಂದ ಹೇರಿದ್ದ ಲಾಕ್‌ಡೌನ್ ಪ್ರಭಾವ ಎಲ್ಲೆಡೆ ಇನ್ನೂ ಕೂಡ ಮುಂದುವರಿದಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ತನ್ನ ಸೌಂದರ್ಯವನ್ನೇ ಕಳೆದುಕೊಂಡಿವೆ. ಆದರೆ ಇಂತಹ ಸ್ಥಿತಿಯಲ್ಲಿಯೇ ಅಬ್ಬರಿಸುತ್ತಿರುವ ಮಳೆಗೆ ಗೋಕರ್ಣದ ಮುಖ್ಯ ಕಡಲತೀರ ಕೊಚ್ಚಿ ಸಮುದ್ರ ಪಾಲಾಗುತ್ತಿದ್ದು, ಪ್ರವಾಸಿಗರ ಅನುಕೂಲಕ್ಕೆ ಹಾಕಿದ್ದ ಆಸನಗಳು, ವಾಚ್ ಟವರ್‌ಗಳನ್ನು ಉಳಿಸಿಕೊಳ್ಳಲು ಇದೀಗ ಸ್ಥಳೀಯರು ಹೆಣಗಾಡುವಂತಾಗಿದೆ.
ಉತ್ತರ ಕನ್ನಡದಲ್ಲಿ ಬಿಕೋ ಅಂತಿವೆ ಪ್ರವಾಸಿ ತಾಣಗಳು; ಮಳೆಯಬ್ಬರಕ್ಕೆ ಕಡಲತೀರ ಸಮುದ್ರ ಪಾಲು ಕೊರೊನಾ ಅಬ್ಬರದ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಕೂಡ ಜೋರಾಗಿದೆ. ಪರಿಣಾಮ ದೇಶ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಐತಿಹಾಸಿಕ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಕಡಲಕೊರೆತ ಶುರುವಾಗಿದೆ. ಗಾಳಿ ಸಹಿತ ಭಾರಿ ಮಳೆಗೆ ಕಡಲಿನಲ್ಲಿ ಆಳೆತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಕಡಲತೀರದ ಜನರಲ್ಲಿ ಆತಂಕ ಶುರುವಾಗಿದೆ. ಸಾಮಾನ್ಯವಾಗಿ ವರ್ಷವಿಡೀ ಬೆಂಗಳೂರು, ಮೈಸೂರು, ಸೇರಿದಂತೆ ದೇಶ, ವಿದೇಶಗಳ ಪ್ರವಾಸಿಗರಿಂದಲೇ ತುಂಬಿರುತ್ತಿದ್ದ ಕಡಲತೀರ ಈ ಬಾರಿ ಕೊರೊನಾ ಹೊಡೆತಕ್ಕೆ ಸಂಪೂರ್ಣ ಬಂದಾಗಿತ್ತು. ಇದೀಗ ಲಾಕ್‌ಡೌನ್ ಓಪನ್ ಆಗಿದೆಯಾದರೂ ಕಡಲತೀರದ ಪರಿಸ್ಥಿತಿ ಮೊದಲಿನಂತಿಲ್ಲ. ಜೊತೆಗೆ ಗೋಕರ್ಣದ ಮಧ್ಯ ಭಾಗದಲ್ಲಿ ಹರಿಯುತ್ತಿರುವ ಸಂಗಮ ತೀರಕ್ಕೆ ಸಂಪೂರ್ಣ ಹಾನಿಯಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು
ಇನ್ನು ಶಿವನ ಆತ್ಮಲಿಂಗವಿರುವ ಮತ್ತು ಐತಿಹಾಸಿಕ ಮಹಾಬಲೇಶ್ವರ ದೇವಾಲಯವಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಧಾರ್ಮಿಕ ವಿಧಿ ವಿಧಾನದ ಬಳಿಕ ಕಡಲ ಸೌಂದರ್ಯ ಸವಿಯುತ್ತಾರೆ. ಈ ಕಾರಣದಿಂದಲೇ ಗೋಕರ್ಣ ಎಂಬುದು ಜಗತ್ ಪ್ರಸಿದ್ಧಿ ಪಡೆದಂಥ ಸ್ಥಳ. ಇಂತಹ ಪ್ರವಾಸಿ ತಾಣಕ್ಕೆ ಸರ್ಕಾರ ಕೂಡ ಆಸನ, ವಾಚ್ ಟವರ್ ಸೇರಿದಂತೆ ಪ್ರವಾಸಿಗರ ರಕ್ಷಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿತ್ತು. ಆದರೆ ಇದೀಗ ಎಲ್ಲವೂ ಕಡಲ ಅಲೆಗೆ ಕೊಚ್ಚಿ ಸಮುದ್ರ ಪಾಲಾಗಿದೆ. ಇಲ್ಲಿನ ಸಂಗಮದ ನೀರು ಸರಿಯಾಗಿ ಹರಿದು ಹೋಗದೇ ತಿರುಗಿ ತೀರದಂಚಿಗೆ ಬರುತ್ತಿದೆ. ಸಂಬಂಧಪಟ್ಟ ಗ್ರಾಮ ಪಂಚಾಯತ್ ಉದಾಸೀನ ತೋರಿಸಿದ್ರಿಂದ ಈ ರೀತಿ ಅನಾಹುತಗಳು ಸಂಭವಿಸಿವೆ. ಕೂಡಲೇ ಶಾಶ್ವತ ಪರಿಹಾರದ ದೃಷ್ಟಿಯಿಂದ ತೀರಕ್ಕೆ ಸಮುದ್ರದ ನೀರು ಬಾರದ ರೀತಿಯಲ್ಲಿ ತಡೆಗೋಡೆ ಹಾಕಬೇಕು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಜಿಲ್ಲಾ ಪಂಚಾಯತ್ ವತಿಯಿಂದ ಈ ಬಾರಿ 15 ಲಕ್ಷ ರೂಪಾಯಿ ಅನುದಾನದಲ್ಲಿ ಸಂಗಮ ಸ್ವಚ್ಚತೆಯ ಕಾಮಗಾರಿ ನಡೆಸಲಾಗಿದೆ. ಆದರೂ ಉಬ್ಬರವಿಳಿತದ ವೇಳೆ ಮಳೆ ನೀರು ಸರಾಗವಾಗಿ ಸಮುದ್ರ ಸೇರದೆ ಪುನಃ ವಾಪಸ್ ಬರುತ್ತಿದೆ. ಇಷ್ಟು ವರ್ಷ ಎಂಥಾ ಮಳೆಗಾಲದಲ್ಲೂ ತೀರಕ್ಕೆ ಕೊಂಚವೂ ಹಾನಿಯಾಗಿರಲಿಲ್ಲ. ಆದ್ರೆ ಈ ಬಾರಿ ಮಾತ್ರ ಕಡಲತೀರ ಕೊಚ್ಚಿ ಹೋಗಿರುವುದು ಗೋಕರ್ಣ ಮುಖ್ಯ ಕಡಲತೀರದ ಸೌಂದರ್ಯವನ್ನು ಹಾಳು ಮಾಡಿದಂತಾಗಿದೆ. ಇನ್ನಾದರೂ ಸಂಬಂಧಪಟ್ಟವರು ಮುಂಜಾಗ್ರತೆ ವಹಿಸಬೇಕಾಗಿದೆ.