ಕಾರವಾರ (ಉತ್ತರ ಕನ್ನಡ):ಟ್ವೀಟ್ ಮೂಲಕ ಗಡಿವಿವಾದ ಎಬ್ಬಿಸಿ ಉದ್ಧಟತನ ಪ್ರದರ್ಶಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಾರವಾರದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅವರ ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಕಾರವಾರದಲ್ಲಿ ಸಿಎಂ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಕರವೇ ಆಕ್ರೋಶ - ಉದ್ಧವ್ ಠಾಕ್ರೆ ಪ್ರತಿಕೃತಿಗೆ ಚಪ್ಪಲಿ ಹಾರ
ಕಾರವಾರ ನಗರದಲ್ಲಿ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಕರ್ನಾಟದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಲು ಸಿದ್ಧವೆಂದು ಉದ್ಧಟತನದ ಹೇಳಿಕೆ ನೀಡಿದ್ದನ್ನು ಖಂಡಿಸಲಾಯಿತು.
ಕಾರವಾರ ನಗರದಲ್ಲಿ ಉದ್ಧವ್ ಠಾಕ್ರೆ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು ಬಳಿಕ ಸುಭಾಶ್ ಸರ್ಕಲ್ ಬಳಿ ಸೇರಿದ್ದರು. ಈ ವೇಳೆ ಮಹಾರಾಷ್ಟ್ರ ಸಿಎಂ ಮರಾಠಿ ಭಾಷಿಕರಿರುವ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಬಗ್ಗೆ ಟ್ವೀಟ್ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಆಕ್ರೋಶ ಹೊರ ಹಾಕಿದ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ, ಕರ್ನಾಟಕದ ಒಂದಿಂಚು ಜಾಗವನ್ನು ಮಹಾರಾಷ್ಟ್ರಕ್ಕೆ ನೀಡುವುದಿಲ್ಲ. ಮಹಾರಾಷ್ಟ್ರದ ನಾಯಕರು ತೆವಲು ತೀರಿಸಿಕೊಳ್ಳಲು ಪದೇ ಪದೇ ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದು, ಇದು ಮುಂದುವರಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.