ಕಾರವಾರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣಾ ಕಾಮಗಾರಿ ನಡೆಸುತ್ತಿರುವ ಐಆರ್ಬಿಯ ಬೇಜವಾಬ್ದಾರಿಯಿಂದ ಹೆದ್ದಾರಿ ತುಂಬ ನೀರು ನಿಂತಿದ್ದು, ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಸ್ಥಳೀಯರ ಪ್ರತಿಭಟನೆ ನಗರದ ಬಿಣಗಾ ಬಳಿ ಅವ್ಯವಸ್ಥೆಯ ಕಾಮಗಾರಿಯಿಂದಾಗಿ ಸಾರ್ವಜನಿಕರು, ಬೈಕ್ ಹಾಗೂ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ. ರಸ್ತೆ ಪಕ್ಕದ ಮನೆಗಳಿಗೆ ನೀರು ನುಗ್ಗುತ್ತಿದ್ದು, ಕೂಡಲೇ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟಿಸಿದರು.
ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡು, ಸಮಸ್ಯೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ತಹಶೀಲ್ದಾರರು ಹಾಗೂ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ, ಐಆರ್ಬಿ ಕಂಪನಿ ಜೆಸಿಬಿಗಳ ಮೂಲಕ ನೀರು ಹರಿದು ಹೋಗಲು ಅನುಕೂಲ ಮಾಡಲಾಯಿತು.
ಕಾರವಾರದ ಅರಗಾದ ಐಎನ್ಎಸ್ ಪಥಂಜಲಿ ಆಸ್ಪತ್ರೆ ಎದುರು ಎದೆಯೆತ್ತರಕ್ಕೆ ನೀರು ತುಂಬಿಕೊಂಡಿದ್ದು, ಬೈತಖೊಲ್ ಬಳಿ ಕೂಡ ಹೆದ್ದಾರಿಯಲ್ಲಿ ಜಲಾವೃತವಾಗಿದ್ದು, ಇಲ್ಲಿಯೂ ಜೆಸಿಬಿ ಮೂಲಕ ನೀರು ಹೋಗಲು ಅನುಕೂಲ ಮಾಡಲಾಯಿತು.