ಕರ್ನಾಟಕ

karnataka

ETV Bharat / state

ಸುಟ್ಟಗಾಯಗಳ ವಿಶೇಷ ಚಿಕಿತ್ಸಾ ಘಟಕಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ.. ಅನಂತಕುಮಾರ ಹೆಗಡೆ

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅವಶ್ಯಕವಿರುವ ಸುಟ್ಟಗಾಯಗಳ ವಿಶೇಷ ಚಿಕಿತ್ಸಾ ಘಟಕವನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ಅನಂತಕುಮಾರ ಹೆಗಡೆ ಪ್ರಸ್ತಾವ ಸಲ್ಲಿಸಿದ್ದಾರೆ.

ಸಂಸದ ಅನಂತಕುಮಾರ ಹೆಗಡೆ

By

Published : Oct 14, 2019, 11:22 PM IST

ಕಾರವಾರ: ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅವಶ್ಯಕವಿರುವ ಸುಟ್ಟಗಾಯಗಳ ವಿಶೇಷ ಚಿಕಿತ್ಸಾ ಘಟಕವನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ಅನಂತಕುಮಾರ ಹೆಗಡೆ ಪ್ರಸ್ತಾವ ಸಲ್ಲಿಸಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಅವರು, ಸುಟ್ಟ ಗಾಯಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿರುವ ರಾಷ್ಟ್ರೀಯ ಕಾರ್ಯಕ್ರಮದ ಅಡಿ ಕಳೆದ ತಿಂಗಳು ಕೇಂದ್ರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಹೆಗಡೆ ತಿಳಿಸಿದ್ದಾರೆ.

ಕಾರವಾರದಲ್ಲಿ 2016 ರಲ್ಲಿ ಪ್ರಾರಂಭಗೊಂಡ ಕ್ಷೇತ್ರದ ಏಕಮೇವ ವೈದ್ಯಕೀಯ ವಿದ್ಯಾ ಸಂಸ್ಥೆ ಇದಾಗಿದೆ. ಈ ವಿದ್ಯಾ ಸಂಸ್ಥೆಯು 350 ಹಾಸಿಗೆಯುಳ್ಳ ಆಸ್ಪತ್ರೆಯನ್ನು ಸಹ ಒಳಗೊಂಡಿದೆ. ಆದರೆ, ಸಂಸ್ಥೆಯ ವೈದ್ಯಕೀಯ ಸೇವೆ ಇನ್ನಷ್ಟು ಸುಧಾರಿಸಬೇಕಿದ್ದು, ಜನರ ಆರೋಗ್ಯದ ಕಡೆಗೆ ಬಹಳಷ್ಟು ಲಕ್ಷ್ಯವಹಿಸಿ ಪೂರ್ವಭಾವಿಯಾಗಿ ಕಾರ್ಯ ನಿರ್ವಹಿಸಬೇಕಿದೆ. ಕ್ಷೇತ್ರದ ಜನತೆ ಈ ಸಂಸ್ಥೆಯಿಂದ ಬಹಳಷ್ಟು ಉನ್ನತವಾದ ವೈದ್ಯಕೀಯ ಸೇವೆಗಳನ್ನು ನಿರೀಕ್ಷಿಸುತ್ತಿದ್ದಾರೆ ಎಂದಿದ್ದಾರೆ.

ಈಗಾಗಲೇ ಬೆಂಕಿ ಅವಘಡದಿಂದಾಗುವ ಹಾಗೂ ಇನ್ನಿತರ ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯಲು ಕ್ಷೇತ್ರದ ಜನತೆ ದೂರದ ಹುಬ್ಬಳ್ಳಿ, ಗೋವಾ ಮತ್ತು ಮಣಿಪಾಲದ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಆರ್ಥಿಕವಾಗಿ ಮತ್ತು ಚಿಕಿತ್ಸೆಯ ಕಾಲಮಿತಿ ಸಹ ಬಹಳ ಹೊರೆಯಾಗುತ್ತಿದ್ದು, ಅದರಲ್ಲೂ ಬಡ ಜನರು ತೀವ್ರ ಸಂಕಷ್ಟಕೀಡಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಘಟಕದ ಮಂಜೂರಿಗೆ ಕೋರಿದ್ದೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details