ಕರ್ನಾಟಕ

karnataka

ETV Bharat / state

ಸಿಆರ್​ಜೆಡ್ ನಿಯಮ ಉಲ್ಲಂಘಿಸಿ ಪಾರ್ಕ್ ನಿರ್ಮಾಣ : ನೆಲೆ‌ ಕಳೆದುಕೊಳ್ಳುವ ಆತಂಕದಲ್ಲಿ ಮೀನುಗಾರರು! - ಕರಾವಳಿ ನಿಯಂತ್ರಣ ವಲಯ

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸುಂಕೇರಿ ಕಡವಾಡ ಗ್ರಾಮವನ್ನು ಸಂಪರ್ಕಿಸುವ ಸೇತುವೆಯ ಬಳಿ ನಗರಸಭೆ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆ ಸ್ಥಳದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಕುಟುಂಬಗಳಿಗೆ ತೊಂದರೆ ಆಗುತ್ತಿದೆ. ಅಲ್ಲದೇ ಸಿಆರ್​ಜೆಡ್​ ನಿಯಮವನ್ನು ಮೀರಿ ಈ ಕಾಮಗಾರಿ ನಡೆಸಲಾಗುತ್ತಿದೆ..

Park construction in violation of the CRZ rule in Karwar
ಸಿಆರ್​ಜೆಡ್ ನಿಯಮ ಉಲ್ಲಂಘಿಸಿ ಪಾರ್ಕ್ ನಿರ್ಮಾಣ

By

Published : Jun 6, 2022, 5:03 PM IST

ಕಾರವಾರ :ಅದು ನೂರಾರು ಮೀನುಗಾರರು ಮೀನುಗಾರಿಕೆ ನಡೆಸುವ ಪ್ರದೇಶ. ಇದೇ ಪ್ರದೇಶವನ್ನು ನಂಬಿಕೊಂಡು ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ, ಇದೀಗ ಅದೇ ಜಾಗವನ್ನ ತಮ್ಮ ವಶಕ್ಕೆ ಪಡೆಯಲು ನಗರಸಭೆ ಮುಂದಾಗಿದೆ. ಮೀನುಗಾರಿಕೆಗೆ ಆಧಾರವಾಗಿರುವ ಪ್ರದೇಶದಲ್ಲಿ ಸಿಆರ್‌ಜೆಡ್ ನಿಯಮ ಉಲ್ಲಂಘಿಸಿ ಪಾರ್ಕ್ ನಿರ್ಮಾಣ ಮಾಡೋದಕ್ಕೆ ಮುಂದಾಗಿದ್ದು, ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸುಂಕೇರಿ ಕಡವಾಡ ಗ್ರಾಮವನ್ನು ಸಂಪರ್ಕಿಸುವ ಸೇತುವೆಯ ಬಳಿ ನಗರಸಭೆ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುಂಕೇರಿ ಗ್ರಾಮದ ಸೇತುವೆ ಬಳಿ ಕಾಳಿ ನದಿ ತೀರದಲ್ಲಿ ಹಿಂದಿನಿಂದಲೂ ನೂರಾರು ಮಂದಿ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆ ಮಾಡಿಕೊಂಡು ಬರುತ್ತಿದ್ದಾರೆ. ಸೇತುವೆ ಪಕ್ಕದಲ್ಲೇ ತಮ್ಮ ಬೋಟುಗಳನ್ನು ಇರಿಸಿ ಕೊಂಡೊಯ್ದು, ಮೀನು ಹಿಡಿದು ತಂದು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು.

ಸಿಆರ್​ಜೆಡ್ ನಿಯಮ ಉಲ್ಲಂಘಿಸಿ ಪಾರ್ಕ್ ನಿರ್ಮಾಣ

ಆದರೆ, ಇದೀಗ ಇದೇ ಪ್ರದೇಶದಲ್ಲಿ ನಗರಸಭೆಯು ಪಾರ್ಕ್ ನಿರ್ಮಾಣ ಮಾಡಲು ಮುಂದಾಗಿದೆ. ಸದ್ದಿಲ್ಲದೇ ಕಾಮಗಾರಿಯನ್ನೂ ಆರಂಭಿಸಿದೆ. ನದಿ ಪಾತ್ರದಲ್ಲಿ ಪಿಚ್ಚಿಂಗ್ ಹಾಕಿ ಮಣ್ಣು ಸುರಿದು ಕಟ್ಟೆ ನಿರ್ಮಿಸಿದ್ದು, ಕಾಮಗಾರಿಗಾಗಿ ಬೃಹದಾಕಾರದ ಕಲ್ಲುಗಳನ್ನ ಸಹ ತಂದು ಸುರಿಯಲಾಗಿದೆ. ಪರಿಣಾಮ ಮೀನುಗಾರಿಕೆಗೆ ತೆರಳಲು ಬೋಟು ಇಳಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮೀನುಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ, ಪಾರ್ಕ್ ನಿರ್ಮಾಣ ಕಾರ್ಯವನ್ನು ಕೈಬಿಡಬೇಕು ಅಂತಾ ಮೀನುಗಾರರು ಒತ್ತಾಯಿಸಿದ್ದಾರೆ.

ಸಿಆರ್‌ಝಡ್ ನಿಯಮ ಉಲ್ಲಂಘನೆ :ನಗರಸಭೆಯು ಸುಂಕೇರಿ ಸೇತುವೆ ಬಳಿ ನಡೆಸಲು ಮುಂದಾಗಿರುವ ಪಾರ್ಕ್ ಕಾಮಗಾರಿಯು ಸಂಪೂರ್ಣವಾಗಿ ಸಿಆರ್‌ಝಡ್ ನಿಯಮಗಳನ್ನ ಗಾಳಿಗೆ ತೂರಿದೆ. ಕರಾವಳಿ ನಿಯಂತ್ರಣ ವಲಯದ ನಿಯಮದ ಪ್ರಕಾರ ಕರಾವಳಿ ಭಾಗದಲ್ಲಿ ಸಮುದ್ರ ಮತ್ತು ನದಿ ತೀರ ಪ್ರದೇಶದಲ್ಲಿ ನಿಗದಿತ ವ್ಯಾಪ್ತಿಯಲ್ಲಿ ಹೊಸದಾಗಿ ಯಾವುದೇ ಕಾಮಗಾರಿಗಳನ್ನು ನಡೆಸುವಂತಿಲ್ಲ.

ಆದರೆ, ನಗರಭೆ ಆ ನಿಯಮವನ್ನು ಉಲ್ಲಂಘನೆ ಮಾಡಿ ಕೆಲಸ ನಡೆಸುತ್ತಿದೆ. ಇನ್ನು ಮ್ಯಾಂಗ್ರೋವ್ ಗಿಡಗಳು ಕಾಳಿ ನದಿ ತಟದಲ್ಲಿ ಬಹಳ ಸೊಂಪಾಗಿ ಬೆಳೆಯುತ್ತವೆ. ಅವುಗಳ ಮೇಲೆ ಮಣ್ಣನ್ನು ಹಾಕಿ ಕಾಳಿ ನದಿ ಹರಿವಿಗೂ ಅಡ್ಡಿಪಡಿಸಲಾಗಿದೆ. ಮಣ್ಣು ಮುಚ್ಚಿದ್ದರಿಂದ ಮಳೆಗಾಲದಲ್ಲಿ ನೆರೆಯುಂಟಾಗುವ ಸಾಧ್ಯತೆ ಕೂಡ ಇದೆ. ಇವೆಲ್ಲವೂ ಕೂಡ ನಗರಸಭೆ ಕಾಮಗಾರಿಯಿಂದ ಎದುರಾಗಿರುವ ಆತಂಕಗಳಾಗಿವೆ.

ತ್ಯಾಜ್ಯ ವಿಲೇವಾರಿ :ಅಲ್ಲದೇ ಕಾಮಗಾರಿ ಪ್ರದೇಶದಲ್ಲೇ ತ್ಯಾಜ್ಯವನ್ನು ಸಹ ತಂದು ಸುರಿಯಲಾಗುತ್ತಿದೆ. ತ್ಯಾಜ್ಯಗಳನ್ನು ತಂದು ಸುರಿದು ಮೀನುಗಾರರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ನಿಯಮಗಳನ್ನು ಪಾಲಿಸಬೇಕಾದ ನಗರಸಭೆಯೇ ಕಾನೂನನ್ನು ಉಲ್ಲಂಘಿಸಿ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರೋದು ತೀವ್ರ ವಿರೋಧಕ್ಕೆ ಗುರಿಯಾಗಿದೆ. ಅಲ್ಲದೇ ಮೀನುಗಾರಿಕೆ ನಡೆಸುವ ಪ್ರದೇಶದಲ್ಲೇ ಕಾಮಗಾರಿಗೆ ಮುಂದಾಗಿರೋದು ಮೀನುಗಾರಿಕೆ ನಂಬಿಕೊಂಡಿರುವವರಿಗೆ ಅಡ್ಡಿಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಕಾಮಗಾರಿ ಕುರಿತು ಸೂಕ್ತ ಪರಿಶೀಲಸಿ ಕ್ರಮ ಕೈಗೊಳ್ಳಬೇಕಿದೆ.

ಇದನ್ನೂ ಓದಿ:ಕಲುಷಿತ ನೀರು ಸೇವಿಸಿ ಮೃತಪಟ್ಟ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ABOUT THE AUTHOR

...view details