ವುಶು ಕ್ರೀಡೆಯಲ್ಲಿ ಪಂಚಾಯಿತಿ ಕ್ಲರ್ಕ್ ದಂಪತಿ ಪುತ್ರಿಯ ಸಾಧನೆ ಕಾರವಾರ:ಮಾರ್ಷಲ್ ಆರ್ಟ್ಸ್ ಅಂದ್ರೆ ಹೆಣ್ಮಕ್ಳು ಕೊಂಚ ಹಿಂದೆ ಸರಿಯೋದೆ ಹೆಚ್ಚು. ಇತ್ತೀಚೆಗೆ ಕರಾಟೆ ತರಬೇತಿಯನ್ನು ಅನೇಕ ಹೆಣ್ಣುಮಕ್ಕಳು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ವುಶು ಅಥವಾ ಕುಂಗ್ ಫೂನಂಥ ಮಾರ್ಷಲ್ ಆರ್ಟ್ಸ್ ಕಲಿಯುವ ಹೆಣ್ಣು ಮಕ್ಕಳ ಸಂಖ್ಯೆ ತೀರಾ ಕಡಿಮೆ. ಆದರೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಾಲಕಿಯೊಬ್ಬಳು ವುಶುನಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚಿ ಇದೀಗ ಝೋನಲ್ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೀರ್ತಿ ಪಾತಕೆಯನ್ನು ಹಾರಿಸಿದ್ದಾಳೆ.
ಇತ್ತೀಚಿಗೆ ಮೈಸೂರಿನ ಚಾಮುಂಡಿವಿಹಾರದ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಖೇಲೋ ಇಂಡಿಯಾ ರಾಜ್ಯ ಮಟ್ಟದ ವುಶು ಲೀಗ್ ಸಬ್ ಜೂನಿಯರ್ಸ್ ವಿಭಾಗದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ನಡೆದ ಶಾನ್ಸು (ಫೈಟ್) ನಲ್ಲಿ ಹೊನ್ನಾವರದ ಯಶಿಕಾ ನಾಯ್ಕ ಚಿನ್ನದ ಪದಕ ಗಳಿಸಿದ್ದಾರೆ. ಈ ಹಿಂದೆ ಕೂಡ ರಾಜ್ಯ ಮಟ್ಟದ ವುಶು ಲೀಗ್ ಶಾನ್ಸು ಫೈಟ್ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ ಮತ್ತು ಒಂದು ಬೆಳ್ಳಿ ಪದಕ ಗೆದ್ದಿದ್ದರು. ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾಳೆ.
ಇದನ್ನೂ ಓದಿ:ಗಿನ್ನಿಸ್ ಪುಟ ಸೇರಿತು ಹೂಲಹೂಪ್ ತಿರುಗಿಸುತ್ತ ಸ್ಕೇಟಿಂಗ್ ಮಾಡಿದ ಬಾಲಕಿ ಸಾಧನೆ
ಮೂಲತಃ ಹೊನ್ನಾವರದ ನವಿಲಗೋಣದ ಹಾಲಿ ಹೊದ್ಕೆ ಶಿರೂರಿನಲ್ಲಿ ವಾಸವಿರುವ, ಮುಗ್ವಾ ಗ್ರಾಮ ಪಂಚಾಯತಿ ಕ್ಲರ್ಕ್ ಕಿರಣಕುಮಾರ್ ನಾಯ್ಕ ಹಾಗೂ ನವಿಲಗೋಣ ಗ್ರಾಮ ಪಂಚಾಯತಿಯ ಕ್ಲರ್ಕ್ ಸುಜಾತ ದಂಪತಿಯ ಪುತ್ರಿ ಯಶಿಕಾ ನಾಯ್ಕ ಇಂತಹದೊಂದು ಸಾಧನೆ ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹೊನ್ನಾವರದ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಯಶಿಕಾ, ಹೊನ್ನಾವರದ ರಾಯಲ್ ಅಕಾಡೆಮಿಯ ರಾಘವೇಂದ್ರ ಅವರಿಂದ ತರಬೇತಿ ಪಡೆಯುತ್ತಿದ್ದಾಳೆ. ಇನ್ನು ಚಿಕ್ಕಂದಿನಿಂದಲೂ ಶಿಕ್ಷಣ ಹಾಗೂ ಮಾರ್ಷಲ್ ಆರ್ಟ್ಸ್ ನಲ್ಲಿ ಆಸಕ್ತಿ ಹೊಂದಿರುವ ಯಶಿಕಾ, ಮುಂದೆ ರಾಷ್ಟ್ರೀಯ ಮಟ್ಟದಲ್ಲೂ ಮಿಂಚಲು ಸಿದ್ಧತೆ ನಡೆಸುತ್ತಿದ್ದಾರೆ. ವುಶು ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಗುರಿ ಇಟ್ಟಿಕೊಂಡಿರುವ ಯಶಿಕಾ ಅವರಿಗೆ ಮುಂದಿನ ದಿನಗಳಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸೋಣ.
ವುಶು ಪಟು ಯಶಿಕಾ ನಾಯ್ಕ ಮಾತನಾಡಿ, "ಹೊನ್ನಾವರದ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದೇನೆ. ನಾನು ಯುಕೆಜಿಯಿಂದಲೂ ರಾಘವೇಂದ್ರ ಹೊನ್ನಾವರ ಅವರ ರಾಯಲ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದೇನೆ. 2017 ರಿಂದ 2021ರಲ್ಲಿ ನಡೆದ ವುಶು ಚಾಂಪಿಯನ್ಶಿಪ್ನಲ್ಲಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಮೂರು ಬಂಗಾರದ ಪದಕ ಮತ್ತು ಒಂದು ಬೆಳ್ಳಿಯ ಪದಕವನ್ನು ಪಡೆದಿದ್ದೇನೆ. ಈ ವರ್ಷದ ಖೇಲೋ ಇಂಡಿಯಾದ ವಿಮೆನ್ಸ್ ಲೀಗ್ನಲ್ಲಿ ಭಾಗವಹಿಸಿ ಬಂಗಾರದ ಪದಕ ಗಳಿಸಿದ್ದೇನೆ. ಸದ್ಯ ನಾನು ಮುಂಬರುವ ರಾಷ್ಟ್ರ ಮಟ್ಟದ ವುಶು ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ:39 ಗಂಟೆಗಳಲ್ಲಿ 19000 ಅಡಿ ಎತ್ತರದ ಶಿಖರ ಏರಿ ವಿಶ್ವದಾಖಲೆ ಬರೆದ 6ರ ಬಾಲೆ