ಶಿರಸಿ(ಉತ್ತರಕನ್ನಡ):ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿ ವಿರೋಧಿಸಿ ಭೂಮಿ ಹಕ್ಕು ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರದಂತೆ ಆಗ್ರಹ.. ಮಸೂದೆ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ಅರಣ್ಯ ಅತಿಕ್ರಮಣ ವೇದಿಕೆ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಶಿರಸಿ ನಗರದ ಬಿಡ್ಕಿಬೈಲಿನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಹಾರ ಹಾಕಿ ಗೌರವಿಸಲಾಯಿತು. ನಂತರ ಕಾಯ್ದೆ ತಿದ್ದುಪಡಿ ಮಸೂದೆ ಪ್ರತಿ ಸುಡುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ರವೀಂದ್ರ ನಾಯ್ಕ, ಕರ್ನಾಟಕ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದು 60 ವರ್ಷವಾಗಿವೆ.
ಇದೀಗ ಮೂಲ ಕಾಯ್ದೆಯ ತತ್ವ ಸಿದ್ಧಾಂತಕ್ಕೆ ಹಾಗೂ ಕೃಷಿಕರ ಹಿತಕ್ಕೆ ಧಕ್ಕೆ ತರುವ ರೀತಿ ತಿದ್ದುಪಡಿ ಮಾಡಲಾಗಿದೆ. ಆದ್ದರಿಂದ ಇಂತಹ ತಿದ್ದುಪಡಿಯನ್ನ ಬಲವಾಗಿ ವಿರೋಧಿಸುವುದು ಅನಿವಾರ್ಯ ಎಂದರು.
ಕರ್ನಾಟಕದಲ್ಲಿ ಕೃಷಿ ಭೂಮಿಯು 123,100 ಸ್ಕ್ವೇರ್ ಕಿ.ಮೀ. ವಿಸ್ತೀರ್ಣದಲ್ಲಿದೆ. ಭೌಗೋಳಿಕವಾಗಿ ಶೇ.64.6 ಕೃಷಿ ಜಮೀನು ಹೊಂದಿದೆ. ಈ ಕ್ಷೇತ್ರದ ಮೇಲೆ 13.74 ಮಿಲಿಯನ್ ರೈತರು ಹಾಗೂ ಕೃಷಿ ಕಾರ್ಮಿಕರು ಅವಲಂಬಿತವಾಗಿದ್ದಾರೆ.
ಅವುಗಳಲ್ಲಿ ಶೇ.23.61ರಚ್ಟು ಭೂಮಿ ಮಾಲೀಕತ್ವ ಹೊಂದಿದವರು ಹಾಗೂ ಶೇ.25.67ರಷ್ಟು ಕೃಷಿ ಕಾರ್ಮಿಕರಾಗಿದ್ದಾರೆ. ಸರ್ಕಾರ ನಿಯೋಜಿತ ತಿದ್ದುಪಡಿ ತಂದಲ್ಲಿ ರೈತ ವಿರೋಧಿ ಭೂ ಮಾಫಿಯಾ ಹೆಚ್ಚುವುದರಲ್ಲಿ ಸಂಶಯವಿಲ್ಲ ಎಂದರು.