ಕಾರವಾರ: ದೇಶದ ಪ್ರಸಿದ್ಧ ಪ್ರವಾಸಿ ತಾಣವಾದ ಮುರ್ಡೇಶ್ವರದ ಮೇಲೆ ಉಗ್ರರ ಕಣ್ಣು ಬಿದ್ದಿದ್ದು, ಇಡೀ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿತ್ತು. ಅದರಲ್ಲಿಯೂ ಶಿವನ ಮೂರ್ತಿಯನ್ನ ವಿರೂಪಗೊಳಿಸಿದ ಚಿತ್ರವನ್ನ ಐಸಿಸ್ ಮ್ಯಾಗಜೀನ್‌ನಲ್ಲಿ ಹಾಕಿಕೊಂಡಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಮುರ್ಡೇಶ್ವರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಮುದ್ರ ಮಾರ್ಗದಲ್ಲಿಯೂ ಸಹ ಕರಾವಳಿ ಕಾವಲು ಪಡೆ ಉಗ್ರ ಚಟುವಟಿಕೆ ಮೇಲೆ ಹದ್ದಿನ ಕಣ್ಣಿರಿಸಿದೆ.
ಶಿವನ ಮೂರ್ತಿ ಮೇಲೆ ಐಸಿಸ್ ಉಗ್ರರ ಕಣ್ಣು: ಭದ್ರತೆ ಹೆಚ್ಚಿಸಿದ ಪೊಲೀಸ್ ಇಲಾಖೆ ಕಳೆದೆರಡು ದಿನಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಬೃಹತ್ ಶಿವನ ಪ್ರತಿಮೆ ವಿರೂಪಗೊಳಿಸಿ ಚಿತ್ರವನ್ನ ಐಸಿಸ್ ತನ್ನ ಮ್ಯಾಗಜೀನ್‌ನಲ್ಲಿ ಹಾಕಿಕೊಂಡಿತ್ತು. ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇನ್ನೊಂದೆಡೆ ಕರಾವಳಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಆತಂಕ ಸಹ ವ್ಯಕ್ತವಾಗಿದ್ದು. ಈ ಹಿನ್ನಲೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಮುರುಡೇಶ್ವರದಲ್ಲಿ ಭದ್ರತೆಯನ್ನ ಹೆಚ್ಚಿಸಿದೆ.
ಕಿಡಿಗೇಡಿತನ ಪ್ರದರ್ಶಿದ ಐಸಿಸ್
ಮುರುಡೇಶ್ವರ ರಾಜ್ಯ ಮಾತ್ರವಲ್ಲದೇ ದೇಶ, ವಿದೇಶಗಳಲ್ಲೂ ಸಾಕಷ್ಟು ಪ್ರಸಿದ್ಧಿ ಹೊಂದಿರುವ ಪ್ರವಾಸಿ ತಾಣವಾಗಿದ್ದು, ಧಾರ್ಮಿಕವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಹೀಗಾಗಿ ಪ್ರತಿವರ್ಷ ವಿವಿಧೆಡೆಯಿಂದ ಲಕ್ಷಾಂತರ ಮಂದಿ ಪ್ರವಾಸಿಗರು, ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆಯುವುದರ ಜತೆಗೆ ಇಲ್ಲಿನ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಾರೆ. ಇಂತಹ ತಾಣದಲ್ಲಿರುವ ಬೃಹತ್ ಶಿವನ ಮೂರ್ತಿಯನ್ನ ಧ್ವಂಸಗೊಳಿಸುವ ಮಾದರಿಯಲ್ಲಿ ರೂಪಿಸಲಾದ ಚಿತ್ರವನ್ನ ಐಸಿಸ್ ತನ್ನ ವಾಯ್ಸ್ ಆಫ್ ಹಿಂದ್ ಮ್ಯಾಗಜೀನ್‌ನಲ್ಲಿ ಪ್ರಕಟಿಸಿದ್ದು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕಿಡಿಗೇಡಿತನ ಪ್ರದರ್ಶಿಸಿತ್ತು.
ಪೊಲೀಸ್ ಬಂದೋಬಸ್ತ್:
ಇನ್ನು ಈ ಘಟನೆಗೆ ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೇ ಅಲರ್ಟ್ ಆಗಿರುವ ಜಿಲ್ಲಾ ಪೊಲೀಸ್ ಇಲಾಖೆ ಮುರುಡೇಶ್ವರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಿದ್ದು, ದೇವಸ್ಥಾನದ ಸುತ್ತ ಹದ್ದಿನ ಕಣ್ಣಿರಿಸಿದೆ. ಸಿ ಸಿಕ್ಯಾಮೆರಾ ಕಣ್ಗಾವಲು, ಸಶಸ್ತ್ರಪಡೆ ನಿಯೋಜನೆ ಜತೆಗೆ ದೇವಸ್ಥಾನಕ್ಕೆ ಆಗಮಿಸುವವರನ್ನ ಸೂಕ್ತ ತಪಾಸಣೆ ನಡೆಸಲಾಗುತ್ತಿದೆ.
ಇನ್ನು ಐಸಿಸ್‌ನ ಮ್ಯಾಗಜೀನ್ 'ದಿ ವೈಸ್ ಆಫ್ ಹಿಂದ್'ನ ಕವರ್ ಪೇಜ್‌ಗೆ ಮುರ್ಡೇಶ್ವರದ ಶಿವನ ಪ್ರತಿಮೆಯ ಪೋಟೋ ಹಾಕಿದ್ದು, ಅದರ ಮೇಲೆ 'Its time to Break False Gods' ಎಂಬ ಬರಹವನ್ನು ಮುದ್ರಿಸಲಾಗಿದೆ. ಜತೆಗೆ ಶಿವನ ಪ್ರತಿಮೆಯ ರುಂಡ ಕತ್ತರಿಸಿ, ಅದರ ತುತ್ತ ತುದಿಗೆ ಐಸಿಸ್ ಧ್ವಜ ಹಾರಾಡುತ್ತಿರುವಂತೆ ವಿಕೃತಗೊಳಿಸಿದ ಚಿತ್ರವನ್ನ ಪ್ರಕಟಿಸಲಾಗಿದೆ.
ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿರುವ ಶಂಕೆ
ಕಳೆದ ಅಗಸ್ಟ್ ತಿಂಗಳಿನಲ್ಲಿ ಐಸಿಸ್ ಮ್ಯಾಗಜೀನ್‌ಗೆ ಕೆಲಸ ಮಾಡುತ್ತಿದ್ದ ಉಗ್ರರ ಸಂಪರ್ಕದಲ್ಲಿದ್ದ ಭಟ್ಕಳದ ಜುಫ್ರಿ ಜವಾಹರ್ ದಾಮುದಿ ಅಲಿಯಾಸ್ ಅಬುಹಾಜಿರ್ ಅಲ್‌ಬದರಿಯನ್ನ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು. ಈ ಹಿನ್ನಲೆ ಸೇಡು ತೀರಿಸಿಕೊಳ್ಳಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಪೋಸ್ಟ್ ಕುರಿತು ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಮುರುಡೇಶ್ವರದಲ್ಲಿ ಇಂದು ಐಸಿಸ್ ಪ್ರತಿಕೃತಿ ಸುಡುವ ಮೂಲಕ ಸ್ಥಳೀಯರು ಉಗ್ರರ ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದು, ಸರ್ಕಾರ ಇಂತಹ ಕೃತ್ಯಗಳು ಮರುಕಳಿಸದಂತೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಒಟ್ಟಾರೇ, ಮುರ್ಡೇಶ್ವರದ ಮೇಲೆ ಉಗ್ರರ ಕಣ್ಣು ಬಿದ್ದಿರುವುದು ಕರಾವಳಿಯಲ್ಲಿ ವಿಧ್ವಂಸಕ ಕೃತ್ಯ ಎಸಗುವ ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ಪೊಲೀಸ್ ಇಲಾಖೆ ಅಲರ್ಟ್ ಆಗಿ ಭದ್ರತೆ ಹೆಚ್ಚಿಸಿದೆ.
ಇದನ್ನೂ ಓದಿ:ISIS ಮ್ಯಾಗಜಿನ್ನಲ್ಲಿ ಮುರ್ಡೇಶ್ವರದ ಶಿವನ ಫೋಟೋ ವಿರೂಪಗೊಳಿಸಿ ಮುದ್ರಿಸಿದ ಆರೋಪ : ವ್ಯಾಪಕ ಆಕ್ರೋಶ