ಕಾರವಾರ(ಉತ್ತರ ಕನ್ನಡ) : ಎಲ್ಲೆಡೆ 75 ನೇ ಸ್ವಾಂತ್ರ್ಯತ್ಸೋವದ ಸಂಭ್ರಮ ಮುಗಿಲುಮುಟ್ಟಿದೆ. ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ ಅವರ ಹೋರಾಟಗಳನ್ನು ಸ್ಮರಣೆ ಮಾಡಲಾಗುತ್ತಿದೆ. ಅದರಂತೆ ಕಾರವಾರದ ಸುಂಕೇರಿಯ ಸ್ವಾತಂತ್ರ್ಯ ಹೋರಾಟಗಾರ ಹನುಮಂತರಾವ್ ಮಾಂಜ್ರೇಕರ್ ಸೇರಿದಂತೆ ಹಲವರು ಸೇರಿ ಸ್ವಾತಂತ್ರ್ಯ ಸಿಕ್ಕ ಸವಿನೆನಪಿಗಾಗಿ ಆಗಸ್ಟ್ 14ರ ಮಧ್ಯ ರಾತ್ರಿ ನೆಟ್ಟ ಅಶ್ವಥ ವೃಕ್ಷವೊಂದು ಇದೀಗ ಬೃಹದಾಕಾರವಾಗಿ ಬೆಳೆದು ಸುತ್ತಮುತ್ತಲಿನ ಜನರಿಗೆ ವಿಶ್ರಾಂತಿ ತಾಣವಾಗಿದೆ.
ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ದೇಶಾಭಿಮಾನ ಮೆರೆದಿದ್ದ ಉತ್ತರ ಕನ್ನಡದ ಜನ ಜಿಲ್ಲೆಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ, ಕರಬಂಧಿ ಚಳವಳಿ, ಚಲೇ ಜಾವ್ ಚಳವಳಿ ಸೇರಿದಂತೆ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅದರಂತೆ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದವರ ಪೈಕಿ ಕಾರವಾರದ ಸುಂಕೇರಿಯ ದಿ. ಹನುಮಂತರಾವ್ ಮಾಂಜ್ರೇಕರ್ ಕೂಡ ಒಬ್ಬರು.
ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜೈಲುವಾಸವನ್ನು ಅನುಭವಿಸಿದ್ದ ಅವರು, ಸ್ವಾತಂತ್ರ್ಯ ಸಿಕ್ಕ ಹಿನ್ನೆಲೆಯಲ್ಲಿ ಆಗಸ್ಟ್ 14ರ ರಾತ್ರಿಯೇ ಕಾರವಾರದಲ್ಲಿ ಬೃಹತ್ ಗಾತ್ರದ ಪಟಾಕಿ ಸಿಡಿಸಲಾಗಿತ್ತು. ಈ ಮೂಲಕವೇ ಸ್ವಾತಂತ್ರ್ಯಗೊಂಡಿರುವುದನ್ನು ತಿಳಿದುಕೊಂಡು ದಿ.ಹನುಮಂತರಾವ್ ಮಾಂಜ್ರೇಕರ್, ಗೋವಿಂದರಾವ್ ಮಾಂಜ್ರೇಕರ್ ಸೇರಿದಂತೆ ನಾವೆಲ್ಲರೂ ಸೇರಿ ನಮ್ಮದೇ ಜಾಗದಲ್ಲಿ ಸ್ವಾತಂತ್ರ್ಯೊತ್ಸವದ ಸವಿ ನೆನಪಿಗಾಗಿ ಅಶ್ವಥ ವೃಕ್ಷ ನೆಟ್ಟಿದ್ದೆವು. ಅದು ಈಗ ದೊಡ್ಡದಾಗಿದೆ ಎನ್ನುತ್ತಾರೆ ದಿ. ಹನುಮಂತರಾಯ್ ಹಿರಿಯ ಮಗ ನಿವೃತ್ತ ಶಿಕ್ಷಕ ಕಮಲಾಕ್ಷ ಮಾಂಜ್ರೇಕರ್.